ಬೆಳವಲ ನಾಡಿನ ರಾಜಧಾನಿಯಾದ ಬಳ್ಳೆಗಾವಿಯಲ್ಲಿ ರಾಜ್ಯ ಭಾರ ಮಾಡಿಕೊಂಡಿದ್ದ ನಿರಹಂಕಾರ ಮತ್ತು ಸುಜ್ಞಾನಿ ಎಂಬ ದಂಪತಿಗಳ ಉದರದಲ್ಲಿ ಅಲ್ಲಮ ಪ್ರಭು ಜನಿಸಿದರು. ಶಿವನ ಕರುಣೆ ಹಾಗೂ ಪ್ರಸಾದದಿಂದ ಜನಿಸಿದ್ದ ಪ್ರಭುವು ಬಹು ಸುಂದರನಾಗಿದ್ದನು, ಮತ್ತು ಮಾಯೆಯನ್ನು ಗೆದ್ದವನಾಗಿದ್ದನು.

ಅರಸು ಮನೆತನದಲ್ಲಿ ಜನಿಸಿ, ಎಲ್ಲ ಸುಖ ಭೋಗಗಳನ್ನು ಸವಿದು ಆ ನಂತರ ವೈರಾಗ್ಯ ಹೊಂದಿದವರ ಉದಾಹರಣೆ ಇತಿಹಾಸದಲ್ಲಿ ಸಾಕಷ್ಟು ಸಿಗುತ್ತವೆ. ಅವರೆಲ್ಲರಲ್ಲಿ ಪ್ರಭುದೇವನು ಮನೆ, ಮಠ, ತಂದೆ ತಾಯಿಗಳನ್ನು ಮತ್ತು ಸಕಲ ಸಂಪತ್ತನ್ನೂ ತ್ಯಜಿಸಿ, ಲೋಕ ಕಲ್ಯಾಣಕ್ಕಾಗಿ ಸಂಚಾರ ಮಾಡುತ್ತಾ ಹೊರಟಿದ್ದು, ವಿಶೇಷ.

ಅವರು ಮನೆ ಬಿಟ್ಟು ಹೋಗುವಾಗ, ತಮ್ಮ ಜೊತೆ ಮದ್ದಳೆ ಯೊಂದನ್ನು ಮಾತ್ರ ತೆಗೆದುಕೊಂಡು ಹೋದರು, ಎಂದು ತಿಳಿದು ಬರುತ್ತದೆ. ಆ ಮದ್ದಳೆಯಿಂದ ಅವರು ಶಿವನ ಧ್ಯಾನದಲ್ಲಿ ತಲ್ಲೀನರಾಗಿ, ಅದನ್ನು ಬಾರಿಸುತ್ತಾ ಆನಂದಿಸುತ್ತಿದ್ದರು. ಒಂಟಿಯಾಗಿ ಕಾನನದಲ್ಲಿ ತಿರುಗುತ್ತಿರುವಾಗ, ಪಶುಪಕ್ಷಿಗಳ ಕಲರವದಲ್ಲಿಯೂ ಶಿವನ ಓಂಕಾರದ ಮಾಧುರ್ಯವನ್ನು ಪ್ರಭು ಸವಿಯುತ್ತ ತಲ್ಲೀನ ರಾಗುತ್ತಿದ್ದರಂತೆ. ಹೀಗೆ ಶಿವನ ಚಿಂತನೆಯಲ್ಲಿ ಲೋಕ ಕಲ್ಯಾಣಕ್ಕಾಗಿ ಸಂಚರಿಸುತ್ತಿದ್ದಾಗ, ಶಿವನ ಕರುಣೆಯಿಂದ ನಿರ್ದೇಹಿಯಾಗುವ ವಿದ್ಯೆ ಅವರಿಗೆ ವಶವಾಯಿತು ಎಂಬ ಪ್ರತೀತಿ ಇದೆ .

ಹೀಗೆ ಸಂಚರಿಸುತ್ತಾ, ಲೀಲೆಗೈಯುತ್ತಾ ಪ್ರಭುವು ಬನವಾಸಿಗೆ ಬಂದು ಅಲ್ಲಿಯ ನಿಸರ್ಗಸುಂದರ ತಾಣದಲ್ಲಿಯ ಮಧುಕೇಶ್ವರ ದೇವಾಲಯದಲ್ಲಿ, ಶಿವನ ಧ್ಯಾನ ಮಾಡುತ್ತಾ, ಮದ್ದಳೆ ಬಾರಿಸುತ್ತಾ ಕಾಲಕಳೆದು, ಮುಂದೆ ಅವರು ಕಲ್ಯಾಣದಭಿಮುಖವಾಗಿ, ನಡೆದ ಪ್ರಭುವು ಮಾರ್ಗ ಮಧ್ಯದಲ್ಲಿ ಲಕ್ಕುಂಡಿಯ ಶರಣ ಅಜಗಣ್ಣನ ಸಹೋದರಿ ಹಾಗೂ ಶಿವಶರಣೆ ಮುಕ್ತಾಯಕ್ಕನ ದುಃಖ ಶಮನಗೊಳಿಸಿದರು. ಅಲ್ಲಿಂದ ಸೊನ್ನಲಿಗೆಗೆ ತೆರೆಳಿ ರಾಜಯೋಗಿ ಸಿದ್ಧರಾಮನ ಅಹಂಕಾರ ಇಳಿಸಿ, ಆತನನ್ನೂ ಕರೆದುಕೊಂಡು ಕಲ್ಯಾಣಕ್ಕೆ ನಡೆದರು.

ಕಲ್ಯಾಣದಲ್ಲಿ ಭಕ್ತಿ ಭಂಡಾರಿ ಎನಿಸಿದ್ದ ಬಸವಣ್ಣನನ್ನು ತೀವ್ರ ಕಠಿಣತರ ಪರೀಕ್ಷೆಗೆ ಒಡ್ಡಿ ಆತನ ಜ್ಞಾನವನ್ನು, ಆತನ ಭಕ್ತಿಯನ್ನು ಮತ್ತು ಆತನಲ್ಲಿರುವ ಮಾನವೀಯತೆ, ಕಳಕಳಿಯನ್ನು ಪರೀಕ್ಷಿಸುತ್ತಾ ಬಸವಣ್ಣನನ್ನು ಪುಟಕ್ಕಿಟ್ಟ ಚಿನ್ನದಂತೆ ಪರಿಶುದ್ಧಗೊಳಿಸಿದರು, ಮತ್ತು ಬಸವಣ್ಣ ಸ್ತಾಪಿಸಿದ ಅನುಭವ ಮಂಟಪದ ಅಧ್ಯಕ್ಷತೆಯನ್ನು ಆತನ ಮತ್ತು ಇತರ ಶಿವಶರಣರ ಆಗ್ರಹಕ್ಕೆ ಮಣಿದು ವಹಿಸಿಕೊಂಡರು.

ಅನುಭವ ಮಂಟಪದ ಅಧ್ಯಕ್ಷರಾಗಿ, ಅಲ್ಲಿ ವೈಶಿಷ್ಟ್ಯಪೂರ್ಣ ಚರ್ಚೆಗೆ ಆಸ್ಪದ ಮಾಡಿಕೊಟ್ಟು, ಮಂಟಪದ ಘನತೆ ಹೆಚ್ಚಿಸಿ ಅದರ ಕೀರ್ತಿ ಎಲ್ಲ ಕಡೆಗೂ ಹರಡುವಂತೆ ಮಾಡಿದರು. ಕೆಲಕಾಲ ಕಲ್ಯಾಣದಲ್ಲಿದ್ದು, ಶರಣರನ್ನು ಉದ್ಧರಿಸುತ್ತಾ ನಿಜಸಮಾಧಿ ಸ್ಥಿತಿಯನ್ನು ಭೋದಿಸಿ, ಅಲ್ಲಿಂದ ಶ್ರೀಶೈಲಕ್ಕೆ ತೆರಳಿ ಅಲ್ಲಿಯ ಕದಳಿ ವನದಲ್ಲಿ ಬಯಲಾದರು.

ಅಲ್ಲಮಪ್ರಭು ದೇವರ ನಾಲ್ಕೈದು ವಚನಗಳನ್ನು ಇಲ್ಲಿ ಬರೆಯುತ್ತಿದ್ದೇನೆ.

ಹೊನ್ನು ಮಾಯೆಯOಬರು, ಹೆಣ್ಣು ಮಾಯೆಯOಬರು, ಮಣ್ಣು ಮಾಯೆಯOಬರು, ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ, ಮನದ ಮುಂದಣಾಸೆಯೇ ಮಾಯೆ ಕಾಣಾ ಗುಹೇಶ್ವರಾಣ
ದೇಹವೇ ದೇಗುಲವಾಗಿರಲು, ಬೇರೆ ಮತ್ತೆ ದೇವಾಲಯವೇಕಯ್ಯ? ಪ್ರಾಣವೇ ಲಿಂಗವಾಗಿರಲು, ಬೇರೆ ಮತ್ತೆ ಲಿಂಗವೇಕಯ್ಯಾ? ಹೇಳಲಿಲ್ಲ, ಕೇಳಲಿ, ಗುಹೇಶ್ವರಾ, ನೀನು ಕಲ್ಲಾದರೆ ನಾನೇನಪ್ಪೆನಯ್ಯಾ? 
ಭಕ್ತಿ ಮೂರರ ಮೇಲೆ ಚಿತ್ರವ ಬರೆಯಿತ್ತು 
ಪ್ರಥಮ ಭಿತ್ತಿಯ ಚಿತ್ರ ಚಿತ್ತದಂತಿತ್ತು
ಎರಡನೆಯ ಭಿತ್ತಿಯ ಚಿತ್ರ ಹೋಗುತ್ತ ಬರುತ್ತ ಇದ್ದಿತ್ತು
ಮೂರನೆಯ ಭಿತ್ತಿಯ ಚಿತ್ರ ಹೋಯಿತ್ತು- ಮರಳಿಬಾರದು
ಗುಹೇಶ್ವರಾ, ನಿಮ್ಮ ಶರಣ ತ್ರಿವಿಧದಿಂದತ್ತಲೆ


ಎಣ್ಣೆ ಬೇರೆ, ಬತ್ತಿ ಬೇರೆ, ಎರಡೂ ಕೂಡಿ ಸೊಡರಾಯಿತ್ತು. 
ಪುಣ್ಯ ಬೇರೆ, ಪಾಪ ಬೇರೆ!ಎರಡೂ ಕೂಡಿ ಒಡಲಾಯಿತು.
ಮಿಗಬಾರದು, ಮಿಗದಿರಬಾರದು! ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು!
ಕಾಯಗುಣವಳಿದು ಮಾಯಾ ಜ್ಯೋತಿ ವಾಯುವ ಕೂಡದ ಮುನ್ನ ಭಕ್ತಿಯ ಮಾಡಬಲ್ಲಾತನೆ ದೇವ,
ಗುಹೇಶ್ವರಾ
ಹಿಡಿವ ಕೈಯ ಮೇಲೆ ಕತ್ತಲೆಯಯ್ಯ
ನೋಡುವ ಕಂಗಳ ಮೇಲೆ ಕತ್ತಲೆಯಯ್ಯ
ನೆನೆವ ಮನದ ಮೇಲೆ ಕತ್ತಲೆಯಯ್ಯ
ಕತ್ತಲೆಯೆOಬುದು ಇತ್ತಲೆಯಯ್ಯ
ಗುಹೇಶ್ವರನೆಂಬುದು ಅತ್ತಲೆಯಯ್ಯ

ನಾನು ಚಿಕ್ಕಮಗಳೂರಿಗೆ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಹೋದಾಗ, ಬಳ್ಳೆಗಾವಿಗೆ ಭೇಟಿ ಕೊಟ್ಟದ್ದು ನನ್ನ ಜೀವನದ ಮಹತ್ವದ ಘಟನೆಗಳಲ್ಲಿ ಒಂದು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s