ಮಂಕುತಿಮ್ಮನ ಕಗ್ಗ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು|
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ||
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ|
ಎಲ್ಲರೊಳಗೊಂದಾಗು -ಮಂಕುತಿಮ್ಮ

ಬೆಟ್ಟದಡಿಯಲ್ಲಿ ಹುಲ್ಲಾಗು, ಮನೆಗೆ ಮಲ್ಲಿಗೆಯ ಹೂವಾಗು. ವಿಧಿಯು ಕಷ್ಟಗಳೆಂಬ ಮಳೆ ಸುರಿಸಿದಾಗ ಕಲ್ಲಾಗು. ದೀನದುರ್ಬಲರ ಪಾಲಿಗೆ ನೀನು ಬೆಲ್ಲ ಸಕ್ಕರೆಯಾಗು. ಎಲ್ಲ ಜನರೊಂದಿಗೆ ಸದಾ ಒಂದಾಗಿರು.

ಹೊಸ ಚಿಗುರು ಹಳೆ ಬೇರು ಕೂಡಿರಲು
ಮರಸೊಬಗು |
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |
ಜಸವು ಜನಜೀವನಕೆ -ಮಂಕುತಿಮ್ಮ||

ಹಳೆಯ ಬೇರಿನಿಂದ ಕೂಡಿದ ಮರ, ಹೊಸ ಚಿಗುರಿನಿಂದ ಕೂಡಿದಾಗ ನೋಡಲು ಸುಂದರವಾಗಿರುವುದು. ಹಳೆಯ ತತ್ವಗಳಿಂದ ಕೂಡಿದ ಧರ್ಮ ಹೊಸ ಯುಕ್ತಿಗಳಿಂದ ಕೂಡಿದರೆ, ಚೆನ್ನ. ಪ್ರಾಚೀನ ಋಷಿವಾಣಿಯೊಡನೆ ವಿಜ್ಞಾನ ಕಲೆ ಕೂಡಿದರೆ ಜನಜೀವನ ಹುಲುಸಾಗುತ್ತದೆ.

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ, ಮಸಣಕೋ ಹೋಗೆಂದ
ಕಡೆಗೋಡು |
ಪದ ಕುಸಿಯೆ ನೆಲವಿಹುದು -ಮಂಕುತಿಮ್ಮ ||

ಮಾನವನ ಬದುಕೇ ಒಂದು ಜಟಕಾಬಂಡಿಯಂತೆ ವಿಧಿಯೇ ಬಂಡಿಯ ಸಾಹೇಬ. ವಿಧಿ ಹೇಳಿದಂತೆ ಪ್ರಯಾಣ ಸಾಗುತ್ತದೆ. ಮದುವೆಗೋ, ಸ್ಮಶಾನಕ್ಕೋ ಅದು ಹೇಳಿದ ಕಡೆಗೆ ಸಾಗಬೇಕು. ಅಡಿ ಸೋತಾಗ ನೆಲವೇ ನೆಲೆ

ನಾವೆಲ್ಲಾ ಚಿಕ್ಕವರಿದ್ದಾಗಿನಿಂದ ಜನಮನದಲ್ಲಿ ಹಾಸುಹೊಕ್ಕಾಗಿರುವ ಮೇಲಿನ ಕಗ್ಗಗಳಲ್ಲಿ ಜೀವನ ತತ್ವ, ಜ್ಞಾನ -ವಿಜ್ಞಾನಗಳ ಸಾಮರಸ್ಯ ಮಾನವನ ಬದುಕಿನ ಚಿತ್ರಣಗಳಿವೆ. “ಕನ್ನಡದ ಭಗವದ್ಗೀತೆ ” ಎಂದೇ ಹೆಸರಾಗಿರುವ “ಮಂಕುತಿಮ್ಮನ ಕಗ್ಗ ” ಯುಗದ ಕವಿ, ಜಗದ ಕವಿ ಡಿ. ವಿ. ಜಿ ಅವರ ಮೇರುಕೃತಿ. ಕನ್ನಡ ಸಾರಸ್ವತ ಲೋಕದ ಅಮರಕೃತಿ.

ಸುಧಾ ಶಿವಾನಂದ ( ಸುಶಿ )

ಸೌಂದರ್ಯ ಸೂಕ್ತ

ಹೊಸ ವರ್ಷದ ಶುಭ ದಿನದಂದು ನನ್ನ ನೆಚ್ಚಿನ ಕವಿಗಳಲ್ಲಿ ಒಬ್ಬರಾದ ಕುವೆಂಪು ಅವರ ಕವನವನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ

ಸುಂದರವಾಗಿರು: ಈ ಸೌಂದರ್ಯ,
ನಿನಗದೆ ಬಾಳಿನ ಸರ್ವೋತ್ತಮ ಕಾರ್ಯ
ಸೌಂದರ್ಯವೆ ಶಿವಕರ್ತವ್ಯ ;
ಸೌಂದರ್ಯವೆ ಸರ್ವೋತ್ತಮ ಗಂತವ್ಯ!
ಸೌಂದರ್ಯವೆ ಸತ್,
ಸೌಂದರ್ಯವೆ ಚಿತ್,
ಸೌಂದರ್ಯವೆ ಆನಂದ:
ಆ ಸಾಧನೆಗಾಗಿಯೆ ಈ ಸೃಷ್ಟಿಯಬಂಧ
ಆ ಸಿದ್ಧಿಗೆ ಮೀಸಲು ಮುಕ್ತಿಯ ನಿತ್ಯಾನಂದ!

ಸುಂದರವಾಗಿರು: ಈ ಸೌಂದರ್ಯ,
ಇಂದ್ರಿಯ ಸೌಂದರ್ಯ,
ಪ್ರಾಣದ ಸೌಂದರ್ಯ,
ಚಿತ್ತದ ಸೌಂದರ್ಯ,
ಆತ್ಮದ ಸೌಂದರ್ಯ,
ಈ ಸೌಂದರ್ಯವೆ ಜೀವನ
ಪುರುಷಾರ್ಥದ ಶಿವಕರ್ತವ್ಯ:
ಈ ಸೌಂದರ್ಯವೆ ಆ ಪುರುಷೋತ್ತಮ
ಚಿರಗಂತವ್ಯ!

ಸುಂದರವಾಗಿರು:
ಸೌಂದರ್ಯದ ಸೇವೆಯೆ ನೀ ಮಾಡುವ
ಮಹದುಪಕಾರ!
ಸುಂದರವಾಗಿರು:
ಸೌಂದರ್ಯದಿ ಸಿದ್ಧಿಪುದಾ ಭಗವತ್
ಸಾಕ್ಷಾತ್ಕಾರ!

ಕುವೆಂಪು

ಕನ್ನಡ ನಾಡು ನುಡಿ ಸಂಸ್ಕೃತಿ

ಕವನ

ಕನ್ನಡ ನಾಡಿನ ಕಲೆ ಸೌಂದರ್ಯವ
ಶ್ರೇಷ್ಠ ಸಂಸ್ಕೃತಿಯ ಭಾಷಾ ಸಾಹಿತ್ಯವ
ಶೌರ್ಯ ಧೈರ್ಯಗಳ ಧರ್ಮಸಮನ್ವಯ
ಸಾಧಿಸಿದ ನಾಡಿದು

ಶೈವ ವೈಷ್ಣವ ಬೌದ್ಧ ಜೈನ ಮತಗಳು
ಆಶ್ರಯಪಡೆದು ಅಭಿವೃದ್ಧಿ ಪಡೆದ
ನಾಡಿದು,ದೇವನೊಬ್ಬ ನಾಮ ಹಲವು
ಎಂಬ ಶಾಶ್ವತ ಸತ್ಯವ ಸಾರಿದ ನಾಡಿದು

ವಚನಕಾರರು ಶರಣಕ್ರಾಂತಿಯನ್ನು
ಮಾಡಿದ ನಾಡಿದು, ಕಿತ್ತೂರು ಚೆನ್ನಮ್ಮ
ಬೆಳವಡಿ ಮಲ್ಲಮ್ಮ, ಅಬ್ಬಕ್ಕದೇವಿಯರು
ಆಳಿದ ನಾಡಿದು

ಗಂಗರ ಕಾಲದ ಗೊಮ್ಮಟ ವಿಗ್ರಹ
ಚಾಲುಕ್ಯರ ಕಾಲದ ಸಾವಿರಾರು
ದೇವಾಲಯಗಳ ನಾಡಿದು,ಗುಹಾಭಿತ್ತಿಚಿತ್ರಗಳು
ಶಿಲಾಯುಧಗಳ ದೊಡ್ಡ ಪರಂಪರೆಯ ನಾಡಿದು

ಎರಡೂವರೆ ಸಾವಿರವರ್ಷಗಳ ವೈಭವಯುತ
ಚರಿತ್ರೆಯ ನಾಡಿದು,ಆಲೂರುವೆಂಕಟರಾಯರ
ಕರ್ನಾಟಕ ಗತವೈಭವವ ಹೆಮ್ಮೆಯಿಂದ
ನೆನೆಯುವ ನಾಡಿದು

ಪಂಪನಂಥಕವಿ,ಪುಲಿಕೇಶಿರಾಜ ಕದಂಬರಾಳಿದ
ನಾಡಿದು, ನೃತ್ಯ ಚಿತ್ರಕಲೆಯ ಬೀಡಿದು
ಕರ್ನಾಟಕ ಸಂಗೀತದ ಹೆಗ್ಗಳಿಕೆಯಿದು
ನಮ್ಮ ಕರುನಾಡ ದೀಪವಿದು

ಸುಶಿ

ಷಟ್ಪದಿ

ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದ ರಲ್ಲಿ ಆರು ಪಾದಗಳಿದ್ದರೆ, ಅದು ಷಟ್ಪದಿ ಎನಿಸುತ್ತದೆ. ಪಾದ ಗಳ ಗಣ, ಮಾತ್ರಾ, ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸಿಕೊಳ್ಳುತ್ತದೆ.ಇದರ 1,2,4 ಮತ್ತು 5 ನೇ ಪಾದ ಗಳು ಪರಸ್ಪರ ಸಮನಾಗಿರುತ್ತವೆ. ಮೂರನೆಯ ಮತ್ತು ಆರನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ಮೂರನೆಯ ಪಾದ, ಒಂದನೆಯ ಪಾದದ ಒಂದೂವರೆ ಯಷ್ಟಿದ್ದು,ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ

ಪಾದ.... ಪಾದ ಎಂದರೆ ಪದ್ಯದ ಒಂದು ಸಾಲು

ಗಣ.... ಗಣ ಎಂದರೆ ಗುಂಪು. ಛಂದಸ್ಸಿನಲ್ಲಿ ಮಾತ್ರಾಗಣ, ಅಕ್ಷರಗಣ, ಅಂಶಗಣಗಳೆಂಬ ಮೂರು ವಿಧದ ಗಣಗಳಿವೆ.

ಮಾತ್ರಾಗಣ.... ಮಾತ್ರಾಗಣ ಎಂದರೆ, ಮಾತ್ರೆಗಳ
ಆಧಾರದ ಮೇಲೆ ವಿಂಗಡಿಸಲಾದ ಗುಂಪು.

ಮಾತ್ರೆ.... ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವದು.

ಲಘು.... ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು(U) ಎನ್ನುವರು.

ಗುರು.... ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು (-)ಎಂದು
ಕರೆಯುವರು.

ಪ್ರಸ್ತಾರ.... ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವದು ಎನ್ನುವರು.


ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಷಟ್ಪದಿಗಳು

1.. ಶರಷಟ್ಪದಿ
2..ಕುಸುಮ ಷಟ್ಪದಿ
3.. ಭೋಗ ಷಟ್ಪದಿ
4.. ಭಾಮಿನಿ ಷಟ್ಪದಿ
5.. ವಾರ್ಧಕ ಷಟ್ಪದಿ
6.. ಪರಿವರ್ಧಿನೀ ಷಟ್ಪದಿ

ನಾನು ಇಲ್ಲಿ ಕುಸುಮ ಷಟ್ಪದಿಯ ಪ್ರಸ್ತಾಪವನ್ನು ಮಾಡುತ್ತಿದ್ದೇನೆ. ಕುಸುಮ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಗುರುಬಸವನ (1430)”ಮನೋವಿಜಯ “ಕಾವ್ಯ ಕುಸುಮ ಷಟ್ಪದಿಯಲ್ಲಿದೆ

1.. ಕುಸುಮ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ
2..1,2,4,5 ನೆಯ ಸಾಲುಗಳು ಸಮನಾಗಿದ್ದು, ಐದು ಮಾತ್ರೆಯ ಎರಡು ಗಣಗಳಿರುತ್ತವೆ.
3..3 ಮತ್ತು 6 ನೆಯ ಪಾದಗಳಲ್ಲಿ, ಐದು ಮಾತ್ರೆಯ ಮೂರು ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ.

‘|’ ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವದನ್ನು ಗಮನಿಸೋಣ.

5|5
5|5
5|5|5|-
5|5
5|5
5|5|5|-
ನನ್ನ ಮೊದಲ ಕುಸುಮ ಷಟ್ಪದಿಯ ರಚನೆ

ಛಂದಸ್ಸಿನ ಪ್ರಸ್ತಾರ

ನೆಮ್ಮದಿಯ |ಅರಸಿದೊಡೆ
ಸಿಗುವುದೇ |ನಮಗೆಲ್ಲ
ಬಯಸಿದೊಡೆ |ಸಿರಿತನವ |ಪಡೆಯಬಹು|ದೇ
ಕಷ್ಟಪಡು |ಜೀವನದಿ
ಏನಾದರು |ಸಾಧಿಸಲು
ಪ್ರಯತ್ನ |ಮಾಡಿದರೆ |ಸಿಗದಿರುವು|ದೇ

ಸುಶಿ

ರುಬಾಯಿ

ರುಬಾಯಿ ಅಥವಾ ರುಬಾಯತ್, ಇದೊಂದು ಪರ್ಶಿಯನ ಸಾಹಿತ್ಯದ ಪ್ರಕಾರ. ಇದು ನಾಲ್ಕು ಸಾಲುಗಳುಳ್ಳ ಪದ್ಯ. ಅರಬಿಯಲ್ಲಿ “ರುಬಿ ” ಎಂದರೆ ನಾಲ್ಕು. ರುಬಾಯಿ ಸುಮಾರು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಾಹಿತ್ಯ ಪ್ರಕಾರ. ಅರಬ್ ಕವಿ ಅಬ್ದುಲ್ ಹಸನ್ ರೂಡೆಕಿ ಅನ್ನುವ ಕವಿ ಮೊದಲಿಗೆ ರುಬಾಯಿ ರಚಿಸಿದನು ಎನ್ನುವ ಇತಿಹಾಸ ಇದೆ. ತದನಂತರ ಖ್ಯಾತಕವಿ, ತತ್ವಜ್ಞಾನಿ, ಗಣಿತಜ್ಞ ಖಗೋಳ ಶಾಸ್ತ್ರಜ್ಞನಾದ ಪರ್ಶಿಯಾದ ಉಮರ್ ಖಯ್ಯಾಮ್(1048-1133)ರಲ್ಲಿ ಇದನ್ನು ಪ್ರಸಿದ್ಧಗೊಳಿಸಿದ.

ಇವನು ಸಾವಿರಾರು ರುಬಾಯಿಗಳನ್ನು ರಚಿಸಿದ್ದಾನೆ. ಇವನ ರುಬಾಯಿಗಳು ಬದುಕಿನ ಎಲ್ಲಾ ಮುಖದ ಅನುಭವಗಳನ್ನು, ಆಧ್ಯಾತ್ಮದ ತಾತ್ವಿಕ ನೆಲೆಗಟ್ಟಿನಲ್ಲಿ ರಚಿಸಿದ್ದಾನೆ. ಹಾಗೆ ಪ್ರೀತಿ- ಪ್ರೇಮ, ಪ್ರೇಮ -ನಿರಾಸೆ, ಮಧ್ಯ -ಮಾನಿನಿ ಹೀಗೆ ಉಮರ್ ಖಯ್ಯಾಮನ ರುಬಾಯಿಗಳಲ್ಲಿವೆ. ಇವನ ರುಬಾಯಿಗಳು ಜನರ ಮನದಲ್ಲಿ ಇಂದಿಗೂ ನೆಲೆಸಿವೆ ಮತ್ತು ನಲಿದಾಡುತ್ತಿವೆ.

ಜಗತ್ತಿನ ಎಲ್ಲಾ ಭಾಷೆಗಳಲ್ಲಿಯೂ ಉಮರ್ ಖಯ್ಯಾಮನ ರುಬಾಯಿಗಳು ಅನುವಾದಿಸಲ್ಪಟ್ಟಿವೆ. “Small is beautiful” ಅನ್ನುವ ಹಾಗೆ ಜೀವಕ್ಕೆ ಪ್ರೇರಣೆ, ಪೂರಕ ಸತ್ಯಗಳಿಂದ ಕೂಡಿದ ಸಾಹಿತ್ಯ ಪ್ರಕಾರವಿದು.

ಇಲ್ಲಿ ಕಥೆಯ ಹಂಗಿಲ್ಲದೆ, ಪಾತ್ರದ ತಂತ್ರದ ಸಹಾಯವಿಲ್ಲದೆ ಭಾವಗಳ ಸಂದೇಶವನ್ನು ನೇರವಾಗಿ ಮನಮುಟ್ಟುವ ಮತ್ತು ಬದುಕಿಗೆ ಆಹ್ಲಾದವನ್ನುOಟು ಮಾಡುವ ಕಸುವುಗಳಾಗಿವೆ. ವಿಷಯಗಳ ಪರಿಮಿತಿ ಇವಕ್ಕಿಲ್ಲ.

ರುಬಾಯಿಗಳ ರಚನೆಗೆ ತನ್ನದೇ ಆದ ನಿಯಮಗಳಿವೆ. ಮೊದಲಿಗೆ ರುಬಾಯಿಗಳು ನಾಲ್ಕು ಸಾಲಿನ ರಚನೆಗಳು. ಪ್ರತಿ ಸಾಲಿನ ಅಕ್ಷರಗಳು ಸಮವಾಗಿರಬೇಕು. ಅಂದರೆ ಮೊದಲ ಸಾಲಿನಲ್ಲಿ ಎಂಟು ಅಕ್ಷರಗಳಿದ್ದರೆ, ನಾಲ್ಕೂ ಸಾಲು ಗಳು ಕೂಡಾ ಎಂಟು ಅಕ್ಷರಗಳನ್ನು ಹೊಂದಿರಬೇಕು. ಸಾಲುಗಳಲ್ಲಿ ಅಕ್ಷರಗಳ ಸಂಖ್ಯೆಗೆ ನಿರ್ಬಂಧನೆ ಇಲ್ಲ. ಎಷ್ಟು ಸಂಖ್ಯೆಗಳ ಅಕ್ಷರಗಳನ್ನಾದರೂ ಬಳಸಬಹುದು. ಒಂದು ಎರಡು, ನಾಲ್ಕನೆ ಸಾಲುಗಳು ಪ್ರಾಸಬದ್ಧವಾಗಿರಬೇಕು. ಮೂರನೆ ಸಾಲು ಪ್ರಾಸವಾಗಿರದೆ, ಪದ್ಯದ ಸತ್ವವಿದ್ದು ಉಳಿದೆಲ್ಲ ಸಾಲಿಗೆ ಪೂರಕವಾಗಿರಬೇಕು. ನಾಲ್ಕನೆ ಸಾಲು ಇಡೀ ಪದ್ಯದ ಸಾರವಾಗಿರಬೇಕು.

ನಾನು ಬರೆದ ಮೊದಲ ರುಬಾಯಿಗಳು

ಚೆಂದದ ಬದುಕಿಗೆ ಒಂಟಿತನ ಯಾಕೆ 
ಹಿಗ್ಗಿನ ಬದುಕಿಗೆ ಬೇಸರಿಕೆ ಯಾಕೆ
ಎಲ್ಲರೊಳಗೊಂದಾಗಿ ಬದುಕು ಎಂದರೆ
ನಿನಗೆ ಬೆರೆಯುವ ತಕರಾರು ಯಾಕೆ
ಮನದನ್ನನ ಸಲ್ಲಾಪ ಹೇಳಲೆಂತು 
ಇನಿಯನ ವಿರಹ ಬಣ್ಣಿಸಲೆಂತು
ಗಂಡ ಹೆಂಡಿರ ಬಾಳುವೆ ಸೊಗಸಿರೆ
ಅದರ ಸುಖ ವರ್ಣಿಸಲೆಂತು ಸಖಿ
ಸುಶಿ 

ಭಾವಗೀತೆ

ನೀ ಬಂದ ನೆನಹು 
ಕಾಡುತಿಹುದು ಮನಸಿನಲಿ
ನೀ ತಂದ ಪ್ರೀತಿ
ಮೂಡುತಿಹುದು
ಹೃದಯದಲಿ


ಮತ್ತೆ ಬಾ ಒಲವಿನ
ಬುತ್ತಿಯ ಹೊತ್ತು
ನೆನಪಿನ ಸುರುಳಿಯ
ಸುತ್ತಿ


ನೀ ಬರುವಾಗ
ಮಾಸದ ನೆನಪುಗಳ
ಹೊತ್ತು ತಾ
ನಾ ಹಿಡಿದಿಡುವೆ
ಅವುಗಳ ನನ್ನ ಮನದ
ಮೂಲೆಯಲಿ


ನೀ ಬಂದು ನಿಂತಾಗ
ಅದೇ ಸ್ವರ್ಗ
ನೀ ಬಂದು ಕೂಡಿದಾಗ
ಅದೇ ಮಿಲನೋತ್ಸವ

ಸುಶಿ

ಗಣೇಶ ಚತುರ್ಥಿ

ಬಾಲಗಂಗಾಧರ ತಿಲಕ್ ಅವರು, ಬ್ರಿಟಿಷರ ವಿರುದ್ಧ ದೇಶದ ಜನರನ್ನು ಒಂದುಗೂಡಿಸಲು, ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆಯನ್ನು ಮೂಡಿಸಿದರು. ಅಂದಿನಿಂದ ಎಲ್ಲೆಡೆ ಸೌಹಾರ್ದತೆಯಿಂದ ಮತ್ತು ಒಗ್ಗಟ್ಟಿನಿಂದ ಗಣೇಶೋತ್ಸವವನ್ನು ಆಚರಿಸುತ್ತಾರೆ.

ಗಣೇಶನನ್ನು ಗಣಪತಿ, ಗೌರಿಪುತ್ರ, ಏಕದOತ, ಗಜಾನನ, ವಿನಾಯಕ, ಲಂಬೋದರ, ಸ್ಕಂದಾಗ್ರಜ, ಗಣಾಧ್ಯಕ್ಷ ಹೀಗೆ ನೂರಾಎಂಟು ಹೆಸರುಗಳಿಂದ ಪೂಜಿಸುತ್ತಾರೆ. ಸಂಕಟ ನಿವಾರಣೆಗಾಗಿ ಗಣೇಶನನ್ನು ನೆನೆದರೆ, ಎಲ್ಲವೂ ಪರಿಹಾರವಾಗುತ್ತದೆ ಎಂಬುದು ಜನರ ನಂಬಿಕೆ.

ಪ್ರತಿಯೊಂದು ಶುಭಕಾರ್ಯಕ್ಕೆ ಗಣೇಶನ ಆವಾಹನೆ, ಪ್ರತಿಷ್ಠಾಪನೆ ಮತ್ತು ಪೂಜೆಗೆ ಪ್ರಥಮ ಆದ್ಯತೆ. ಮಹಾಭಾರತದ ಕಾಲದಿಂದಲೂ ಗಣೇಶ ಚತುರ್ಥಿ ಆಚರಣೆಯಲ್ಲಿತ್ತು ಎಂಬುದಕ್ಕೆ ಪೌರಾಣಿಕ ಆಧಾರಗಳಿವೆ. ಸ್ವಯಂ ಶ್ರೀ ಕೃಷ್ಣನೇ ಗಣೇಶನನ್ನು ಪೂಜಿಸಿದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಗಣೇಶನ ಪುಣ್ಯ ಸ್ಮರಣೆಯು ಜೀವನದ ಮಾರ್ಗವನ್ನು ಸುಗಮಗೊಳಿಸುತ್ತದೆ.

L

ವಕ್ರತುಂಡಾಯ ನಾಗಯಜ್ನೋಪವಿತಾಯ ಚತುರ್ಭುಜಾಯ / ಮೋದಕ ರೂಪಾಯ ಸಿದ್ಧಿವಿಜ್ಞಾನ ರೂಪಿಣೆ ಫಲದಾ ಮಂಗಲಂ //

ಏಕ ದಂತಾಯ ವಿದ್ಮಹೇ, ವಕ್ರ 
ತುಂಡಾಯ
ಧೀಮಹೇ, ತನ್ನೋ ದಂತಿ:
ಪ್ರಚೋದಯಾತ್..
ವಕ್ರತುಂಡ ಮಹಾ ಕಾಯ
ಕೋಟಿ ಸೂರ್ಯ ಸಮಪ್ರಭ,
ನಿರ್ವಿಘನಂ ಕುರುಮೇ ದೇವ
ಸರ್ವ ಕಾರ್ಯೇಶು ಸರ್ವದ..
ಆ ಗಜಾನನ ಪದ್ಮಾರ್ಕ್O
ಗಜಾನನ ಮಹರ್ನಿಶO, ಅನೇಕ
ದಂತO ಭಕ್ತಾನಾO ಏಕ ದಂತO
ಉಪಸ್ಮಾಹೆ...

ಗಣಪತಿಯ ಸ್ತೋತ್ರದೊಂದಿಗೆ ನಾಳೆ ಅನಂತ ಚತುರ್ದಶಿಯಂದು ಗಣೇಶನನ್ನು ಮತ್ತೆ ಮುಂದಿನ ವರ್ಷ ಬೇಗ ಬಾ .. ಎಂದು ಹೇಳಿ ಬೀಳ್ಕೊಡೋಣ.

ಸುಶಿ

ಟಂಕಾ

ಟಂಕಾ ಇದು ಜಪಾನಿನ ಮತ್ತೊಂದು ಕಾವ್ಯ ಪ್ರಕಾರ. ಇದು ಐದು ಸಾಲುಗಳ ಒಂದು ಸಾಹಿತ್ಯ ಶೈಲಿ. ಮೂವತ್ತೊಂದು ಅಕ್ಷರ ಜೋಡಣೆಯ ಛಂದಸ್ಸಿನ ಗುಚ್ಚ. ಇಲ್ಲಿ ಅಕ್ಷರಗಳ ಲೆಕ್ಕ ಗಣನೆಗೆ ಬರುತ್ತದೆ. ಟನ್ ಎಂದರೆ short (ಚಿಕ್ಕ ), ಕಾ ಎಂದರೆ song (ಕವಿತೆ ). ಹಾಯ್ಕು, ಟಂಕಾ, ವಾಕಾ ಇವೆಲ್ಲ ಜಪಾನೀ ಭಾಷೆಯಲ್ಲಿನ ಸಾoಪ್ರದಾಯಿಕ ಕಾವ್ಯ ರಚನೆಯ ಪ್ರಕಾರಗಳು.

ಇದು ಹಾಯ್ಕು ಗಿಂತ ದೊಡ್ಡದು. ಮೊದಲನೆಯ ಸಾಲಿನಲ್ಲಿ ಐದು ಅಕ್ಷರ, ಎರಡನೆಯ ಸಾಲಿನಲ್ಲಿ ಏಳು ಅಕ್ಷರ, ಮೂರನೆಯ ಸಾಲಿನಲ್ಲಿ ಐದು ಅಕ್ಷರ, ನಾಲ್ಕನೆಯ ಸಾಲಿನಲ್ಲಿ ಏಳು ಅಕ್ಷರ, ಐದನೆಯ ಸಾಲಿನಲ್ಲಿ ಏಳು ಅಕ್ಷರ ಹೀಗೆ ಐದು ಸಾಲುಗಳಲ್ಲಿ ಟಂಕಾ ರಚನೆಯಾಗುತ್ತದೆ.

ಇವು ಜಪಾನ್ ನಲ್ಲಿ 1882 ರಿಂದ 1953 ರ ಅವಧಿಯಲ್ಲಿ ಸುಧಾರಣೆಗೊಂಡು ಒಂದು ರೂಪುರೇಷೆ ಪಡೆದವೆಂದು ಗೊತ್ತಾಗುತ್ತದೆ.

ಉತ್ತರ ಕರ್ನಾಟಕದಲ್ಲಿ, ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡು ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಹೈದ್ರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ.

ಟಂಕಾ ದಲ್ಲಿ ಪ್ರಕೃತಿ ಸೌಂದರ್ಯ, ಪ್ರೀತಿ ಪ್ರೇಮ, ಭಾವನಾತ್ಮಕ ವಿಷಯಗಳು ಹೆಚ್ಚಾಗಿ ಕಂಡುಬರುತ್ತವೆ.

ಟಂಕಾ ರಚನೆಯಲ್ಲಿ ನನ್ನ ಮೊದಲ ಪ್ರಯತ್ನ

ಬೆಳಗಿನ ಈ 
ಹೊತ್ತಲ್ಲಿ ಬೆಸೆಯೋಣ
ಈ ಬಂಧನವ
ಹೊಸೆಯೋಣ ಸಂಬಂಧ
ಹೆಣೆಯೋಣ ಪ್ರೀತಿಯ


ಒಲವೆಂಬುದು
ಹೃದಯದಲ್ಲಿರುವ
ಅಂತರಗಂಗೆ
ಎಲ್ಲರೊಂದಿಗೆ ಅದು
ಹಂಚಿ ಹರಡಬೇಕು


ಬಾಹುಬಂಧನ
ನೀನು ಚಾಚಿದಾಗಲೇ
ಕೇಳಲಿಲ್ಲವೆ
ನನ್ನ ಅಂತರಂಗದ
ಗುಟ್ಟಿನ ಮಾತುಗಳು


ನಿನ್ನೊಲವಿನ
ಹೃದಯದ ಮಿಂಚನ್ನು
ಬೆರಗಿನಿಂದ
ಅನುಭವಿಸುವಾಗ
ನೀ ಬಂದೆ ಸನಿಹದಿ

ಸುಶಿ
ಹಾಯ್ಕು

ಕಾವ್ಯ ಪರಂಪರೆಯೇ ಹಾಗೆ, ತನ್ನದೇ ಆದ ಲಯ, ನಿಯಮ, ಲಕ್ಷಣಗಳೊಂದಿಗೆ ಹೊರಬರುವ ಸಾಹಿತ್ಯ ಪ್ರಕಾರ, ಸಾಹಿತ್ಯಾಸಕ್ತರ ಮನ ಸೆಳೆಯುತ್ತದೆ. ಅಂತಹ ಪ್ರಕಾರದ ಸಾಹಿತ್ಯ ಅಂದರೆ ಹಾಯ್ಕು ಸಾಹಿತ್ಯ. ಈ ಹೆಸರನ್ನು, ಎರಡು ರೀತಿಯಲ್ಲಿ ಹೈಕು ಮತ್ತು ಹಾಯ್ಕು ಎಂದು ಬರೆಯುತ್ತಾರೆ. ಇದು ಮೂಲತಹ ಜಪಾನಿನ ಆಧ್ಯಾತ್ಮಿಕ ವಿಚಾರಗಳನ್ನು ವ್ಯಕ್ತಪಡಿಸಲು ಹುಟ್ಟಿದ ಲಯವೇ ಹೈಕು, ಎಂದು.

ಕನ್ನಡ ಸಾಹಿತ್ಯದೊಳಗೆ ತ್ರಿಪದಿ, ಕಂದಪದ್ಯ, ಷಟ್ಪದಿ, ಗಜಲ್ ಈ ಎಲ್ಲಾ ಪ್ರಕಾರಗಳು, ತಮ್ಮದೇ ಆದ ನಿಯಮ ಲಕ್ಷಣಗಳನ್ನು ಹೇಗೆ ರಚಿಸಿಕೊಂಡು ಹೋಗುತ್ತವೆಯೋ, ಅದೇ ರೀತಿಯಲ್ಲಿ ಹಾಯ್ಕು ಸಹ ನಿಯಮ, ಲಯ ಹೊಂದಿರುವದನ್ನು ಕಾಣಬಹುದಾಗಿದೆ.

ಹಾಯ್ಕು ಪ್ರಕಾರವು ಮೂರು ಚರಣಗಳಿಂದ ಕೂಡಿದ್ದು, ಮೊದಲನೆಯ ಚರಣದಲ್ಲಿ ಐದು ಅಕ್ಷರ, ಎರಡನೆಯ ಚರಣದಲ್ಲಿ ಏಳು ಅಕ್ಷರ, ಮೂರನೆಯ ಚರಣದಲ್ಲಿ ಐದು ಅಕ್ಷರ, ಒಟ್ಟು ಹದಿನೇಳು ಅಕ್ಷರಗಳನ್ನು ಹೊಂದಿರುವ ಒಂದು ಗುಂಪು. ಈ ರೀತಿಯ ಸಮೂಹಕ್ಕೆ ಹಾಯ್ಕು ಎನ್ನುವರು.

ಬೃಹತ್ತಾದ ಅರ್ಥವನ್ನು, ಕಿರಿದಾದ ಹದಿನೇಳು ಅಕ್ಷರಗಳಲ್ಲಿ, ಅರ್ಥ ಬಿಂಬಿಸುವ ಸಾಹಿತ್ಯ ಪ್ರಕಾರವೇ ಹಾಯ್ಕು. ಈ ಸಾಹಿತ್ಯ ಪ್ರಕಾರವನ್ನು ಮೊಟ್ಟಮೊದಲಿಗೆ ಕನ್ನಡದಲ್ಲಿ ಬಳಕೆಗೆ ತಂದವರು ಹಿರಿಯ ಸಾಹಿತಿ ವೀರ ಹನುಮಾನ್.

ನಾನು ಬರೆದ ಮೊದಲ ಹಾಯ್ಕುಗಳು

ಹೃದಯದಲಿ 
ದೇವನು ಇರುವಾಗ
ಚಿಂತೆ ಯಾತಕೆ
ಕನಸುಗಳು 
ಬಂದು ನಿಂತಿವೆ ಈಗ
ಮನದಾಳದಿ

ಭಾವನೆಗಳು 
ಒತ್ತಿಕೊಂಡಿವೆ ಈಗ
ಬಿಟ್ಟು ಬಿಡದೆ
ಮನದೊಳಗೆ 
ಆಕಾಂಕ್ಷೆಗಳಿಲ್ಲದೆ
ಬರಿದಾಗಿದೆ

ಸುಶಿ

ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಮಹಿಳೆಯರು

ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯಲ್ಲಿ, ಕನ್ನಡ ಮಾತೃಭಾಷೆಯಾಗಿ, ಕನ್ನಡ ನಾಡಿನ ಸಾಹಿತಿಗಳಾಗಿ ಸಂಸ್ಕೃತದಲ್ಲಿ ಕಾವ್ಯ ರಚಿಸಿದ ಇಬ್ಬರು ಕವಿಯಿತ್ರಿಯರು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಕ್ರಿ. ಶ. ಏಳನೆಯ ಶತಮಾನದ ವಿಜಯಕ್ಕ ಎಂಬ ಕನ್ನಡತಿ, ಸಂಸ್ಕೃತದಲ್ಲಿ “ಕೌಮುದಿ ಮಹೋತ್ಸವ ” ಎಂಬ ಐದು ಅಂಕಗಳ ನಾಟಕವನ್ನು ರಚಿಸಿದಳು. ಈಕೆಯ ವಿದ್ವತ್ತನ್ನು ಅನಂತರದ ಕಾವ್ಯಮೀಮಾOಸಕರೂ ಕವಿಗಳೂ ಸ್ತುತಿಸಿದ್ದಾರೆ. ಕರ್ನಾಟಕವನ್ನು ಆಳಿದ ಬಾದಾಮಿ ಚಾಲುಕ್ಯರ ಕುಲಶೇಖರನಾದ ಪ್ರಸಿದ್ದ ಇಮ್ಮಡಿ ಪುಲಿಕೇಶಿಯ ಮಗ ಚಂದ್ರಾದಿತ್ಯನ ರಾಣಿಯೇ ಈ ವಿಜಯಾಬಿಕೆ.

ಸೇನಾನಿ ಕಂಪಣ್ಣೊಡೆಯನ ಧರ್ಮಪತ್ನಿ ಗಂಗಾದೇವಿಯು (ಕ್ರಿ. ಶ. 1372)ತನ್ನ ಪತಿಯ ದಿಗ್ವಿಜಯಗಳಲ್ಲಿ ಜೊತೆಗಿದ್ದು ಆ ಯುದ್ಧಾನುಭವಗಳನ್ನು ” ಮಧುರಾ ವಿಜಯo” (ವೀರ ಕಂಪಣಾಚಾರ್ಯ ಚರಿತಂ ) ಎಂಬ ಸಂಸ್ಕೃತ ಕಾವ್ಯದಲ್ಲಿ ಬಿತ್ತರಿಸಿದ್ದಾಳೆ. ಕನ್ನಡ ಮಹಿಳೆಯರು ಸಂಸ್ಕೃತ-ಪ್ರಾಕೃತಾದಿ ಇತರ ಭಾಷೆಗಳಲ್ಲಿ, ಅಗಾಧವೆನ್ನಬಹುದಾದ ಪಾಂಡಿತ್ಯ ಸಾಧಿಸಿದ್ದರು ಎನ್ನುವದಕ್ಕೆ ಇವರಿಬ್ಬರೂ ದೃಷ್ಟಾಂತವಾಗಿ ನಿಲ್ಲುತ್ತಾರೆ, ಎಂದು ಕಮಲಾ ಹಂಪನಾ ಅವರು ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ.

ಹನ್ನೆರಡನೆಯ ಶತಮಾನದ ಮೇರು ಮಂದಾರವಾಗಿ ವಚನಸಾಹಿತ್ಯದಲ್ಲಿ ನೆಲೆನಿಂತವಳು ಕವಿಯಿತ್ರಿ ಅಕ್ಕಮಹಾದೇವಿ. ಈಕೆ ವಚನ ಸಾಮ್ರಾಜ್ನಿಯಾಗಿ ಮೆರೆದವಳು. ಈಕೆಯ ಸಮಕಾಲೀನರಾದ ನೂರಾರು ವಚನಗಾರ್ತಿಯರು ಕನ್ನಡ ಸಾಹಿತ್ಯದ ಸಂಪತ್ತನ್ನು ಶ್ರೀಮಂತಗೊಳಿಸಿದ್ದಾರೆ. ಅದರಲ್ಲಿ ಅಕ್ಕನಾಗಮ್ಮ ಸಹ ಒಬ್ಬಳು.

ಇದೇ ಕಾಲದಲ್ಲಿ ಜೀವಿಸಿದ್ದ ಮತ್ತೊಬ್ಬ ಕವಿಯಿತ್ರಿ ಎಂದರೆ ಜಕ್ಕಲಾOಬ. ಈಕೆ ಬರೆದ ಕಾವ್ಯದ ಹೆಸರು #ಗುಣಾoಕ ಮಾಲೆ ಚರಿತೆ “. ಇದು ಅನುಪಲಭ್ದ ಕಾವ್ಯ. ಷಟ್ಪದಿ ಚಂದಸ್ಸಿನಲ್ಲಿ ರಚಿತವಾಗಿತ್ತೆಂದು ತಿಳಿಯಬಹುದು.

ಚಂದನಾoಬಿಕೆಯ ಕಥೆ” ಎನ್ನುವ ತ್ರಿಪದಿ ಕಾವ್ಯ, ಅಜ್ಞಾತ ಕವಿಯಿತ್ರಿಯ ಕಥನ ಕಾವ್ಯ. ಐತಿಹಾಸಿಕ ವ್ಯಕ್ತಿಯಾದ ಭಗವಾನ ಮಹಾವೀರರ ಚಿಕ್ಕಮ್ಮ ಹಾಗೂ ಮೂವತ್ತಾರು ಸಾವಿರ ಆರ್ಜಿಕೆಯರ ನೇತೃತ್ವ ವಹಿಸಿದ್ದ ಚಂದನಬಾಲೆಯ ಜೀವನಚರಿತ್ರೆ ಈ ಕಾವ್ಯದ ವಸ್ತು. ಮಹಿಳೆಯೊಬ್ಬಳು ತ್ರಿಪದಿ ಛಂದಸ್ಸಿನಲ್ಲಿ ರಚಿಸಿದ ಏಕೈಕ ಕಾವ್ಯವೆಂಬ ಹೆಗ್ಗಳಿಕೆ ಈ ಕೃತಿಯದು . ಇದರ ಕಾಲ ಹದಿನೈದನೆಯ ಶತಮಾನ.

ಕನ್ನಡ ಸಾಹಿತ್ಯದ ಮೊಟ್ಟಮೊದಲ ಏಕೈಕ ಪ್ರಮುಖ ಚಂಪೂ ಕವಿಯಿತ್ರಿ ಎಂದರೆ ನಾಗಲದೇವಿ (ಕ್ರಿ. ಶ. 1431-1462) ತನ್ನ ಕಾವ್ಯವನ್ನು ಚಂಪೂ ಶೈಲಿಯಲ್ಲಿ ರಚಿಸಿ, ತನ್ನ ಕನ್ನಡ ಭಾಷೆಯ ಪ್ರೀತಿಯನ್ನು, ತನ್ನ ಕಾವ್ಯದಲ್ಲಿ ಸ್ಪುರಿಸಿರುವ ನಾಗಲದೇವಿ ಒಬ್ಬ ಅನನ್ಯ ಕವಿಯಿತ್ರಿ.

ಅನಂತರದ ಕವಿಯಿತ್ರಿ ಸಂಚಿ ಹೊನ್ನಮ್ಮ. “ಹದಿಬದೆಯ ಧರ್ಮ ” ಎನ್ನುವ ವಿಶಿಷ್ಟ ಕಾವ್ಯವನ್ನು ಸಾಂಗತ್ಯ ಛಂದಸ್ಸಿ ನಲ್ಲಿ ರಚಿಸಿದ ಹಿರಿಮೆ ಈಕೆಯದು. “ಪೆಣ್ಣು ಪೆಣ್ಣೆoದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ” ಎಂದು ಬಂಡಾಯದ ಧ್ವನಿ ಎತ್ತಿದ ಕವಿಯಿತ್ರಿ

ಹೆಳವನಕಟ್ಟೆ ಗಿರಿಯಮ್ಮ ಬಹುಮುಖ ಪ್ರತಿಭೆಯ ಕವಿಯಿತ್ರಿ. ದೇವರನಾಮ, ಭಕ್ತಿಗೀತೆಗಳು ಹಾಗೂ ಕಾವ್ಯಗಳನ್ನು ರಚಿಸಿದ ಭಕ್ತಿ ಭಾವದ ಕವಿಯಿತ್ರಿ. ಇದೇ ಸಾಲಿಗೆ ಸೇರಿದ ಮತ್ತೊಬ್ಬ ಕವಿಯಿತ್ರಿ ಶೃಂಗಾರಮ್ಮ.

ಇಪ್ಪತ್ತನೆಯ ಶತಮಾನದಲ್ಲಿ ಆಧುನಿಕ ಸಾಹಿತ್ಯಕ್ಕೆ ಅಡಿಗಲ್ಲು ಇಟ್ಟವರು ನಂಜನಗೂಡಿನ ತಿರುಮಲಾoಬಾ, ಬೆಳಗೆರೆ ಜಾನಕಮ್ಮ, ಸೀತಾ ಪಡುಕೋಣೆ, ಗಿರಿಬಾಲೆ, ಆರ್. ಕಲ್ಯಾಣಮ್ಮ, ತಿರುಮಲೆ ರಾಜಮ್ಮ ಮೊದಲಾದವರು.

ಸ್ವಲ್ಪ ನಂತರದ ಕಾಲದ ಜಯದೇವಿ ತಾಯಿ ಲಿಗಾಡೆ ಅವರು “ಶ್ರೀ ಸಿದ್ದರಾಮ ಚರಿತೆ ” ಹಾಗೂ ಶ್ರೀಮತಿ ಮಲ್ಲಿಕಾ ಅವರು “ಸ್ವಾಮಿ ವಿವೇಕಾನಂದರ ಜೀವನಗಾಥಾ ” ಮಹಾಕಾವ್ಯಗಳನ್ನು ರಚಿಸಿದರು.

ಇಪ್ಪತ್ತನೆಯ ಶತಮಾನ, ಲೇಖಕಿಯರ ಸುಗ್ಗಿಯ ಕಾಲವೆಂದು ಹೇಳಬಹುದು. ಈ ಶತಮಾನದ ಕಡೆಯ ಭಾಗದಲ್ಲಿ ಲೇಖಕಿಯರ ಸಾಹಿತ್ಯ ಕೃಷಿ ಗಣನೀಯವಾದುದು. (1975-2000) ಲೇಖಕಿಯರು ವಿವಿಧ ಆಯಾಮಗಳ, ವಿವಿಧ ಬಗೆಯ ಬರಹಕ್ಕೆ ಒಳಗೊಂಡಿರುವದು ಒಂದು ಆರೋಗ್ಯಕರ ಬೆಳವಣಿಗೆ ಆಕೆಗೆ ದೊರೆತ ಉನ್ನತ ಶಿಕ್ಷಣ, ಬೇರೆ ಬೇರೆ ಕ್ಷೇತ್ರಗಳಲ್ಲಿನ ಉದ್ಯೋಗದ ಅನುಭವ, ಆರ್ಥಿಕ ಸ್ವಾತಂತ್ರ್ಯ, ಪತ್ರಿಕೆಗಳ ಪ್ರೋತ್ಸಾಹ, ಸಹೃದಯ ಓದುಗರು.. ಹೀಗೆ ಹಲವು ಹತ್ತು ರೀತಿಯಿಂದ ದೊರೆತ ಉತ್ತೇಜನ, ಲೇಖಕಿಯರನ್ನು ಮೌಲಿಕ ಕೃತಿಗಳನ್ನು ರಚಿಸುವತ್ತ ಪ್ರೇರೆಪಿಸಿದೆ.

ಅನಂತರದ ಕವಿಯಿತ್ರಿಯರ ಸಾಲು ದೊಡ್ಡದು. ಇಪ್ಪತ್ತೊoದನೆಯ ಶತಮಾನದಲ್ಲಿ ಭಗವಾನ್ ಬುದ್ಧರನ್ನು ಕುರಿತ “ಬುದ್ಧ ಮಹಾಕಾವ್ಯ ” ಡಾ ಲತಾ ರಾಜಶೇಖರ್ ಅವರ ಮುಖ್ಯ ಕೊಡುಗೆ. ಹೀಗೆ ಸಾಗುತ್ತಲೇ ಇರುತ್ತದೆ, ಮಹಿಳಾ ಸಾಹಿತಿಗಳ ಅಮೋಘ ರಚನೆಗಳು.

ಸುಶಿ