ಸರ್ವಜ್ಞ

ವಚನ ಸಾಹಿತ್ಯ ಯಾವಾಗಲೂ ನಿತ್ಯನವೀನ ಎನಿಸುತ್ತದೆ. ಎಷ್ಟು ಬಾರಿ ಓದಿದರೂ ಅದರ ಸವಿ ಹೆಚ್ಚುವದೇ ಹೊರತು ಕಡಿಮೆ ಆಗದು. ಇದಕ್ಕೆ ಕಾರಣ ವಚನಗಳಲ್ಲಿ ಬರುವ ವಿಷಯಗಳು, ಜನಸಾಮಾನ್ಯನ ಹೃದಯಕ್ಕೆ ಅತಿ ಹತ್ತಿರವಾಗುತ್ತವೆ. ಅವನ ಹೃದಯದ ಬಾಗಿಲನ್ನು ತಟ್ಟುತ್ತವೆ. ಅದರಲ್ಲಿ ಸರ್ವಜ್ಞ ಕವಿಯೂ ಹೌದು, ವಚನ ಕಾರನೂ ಹೌದು.

ನಿರಕ್ಷರ ಕುಕ್ಷಿ ಎನಿಸಿದ ಈತನ ವಚನಾವಳಿಯಲ್ಲಿ, ಬರುವ ಒಂದೊಂದು ತ್ರಿಪದಿಯೂ ಕಟುಸತ್ಯ. ಅಲ್ಲದೆ ಜನಸಾಮಾನ್ಯರಿಗೆ ತಿಳಿಯುವ ಹಾಗೆ ಸರಳ ಸುಂದರ ಶೈಲಿಯಲ್ಲಿ, ಸರ್ವಜ್ಞ ವಿಷಯವನ್ನು ವಿವರಿಸಿದ್ದಾನೆ. ನಿರೂಪಣೆಯಲ್ಲಿ ನೈಜತೆ ಇದೆ. ವಚನಗಳು ಇಂದಿಗೂ, ಅಂದರೆ ಈಗಿನ ಧಾರ್ಮಿಕ, ಸಾಮಾಜಿಕ, ರಾಜನೈತಿಕ ಸ್ಥಿತಿ, ಗತಿಗಳಿಗೆ ಸಂಬಂದಿಸಿದಂತೆ ಕಂಡು ಬರುತ್ತವೆ. ಯಾರೊಬ್ಬರಿಗೂ ನೋವಾಗದಂತೆ ಧರ್ಮ, ಸಮಾಜ ಕಲ್ಯಾಣಕ್ಕೆ ಚ್ಯುತಿ ಬಂದಾಗ, ಕವಿ ಕಟುವಾಗಿಯೇ ಟೀಕಿಸಿದ್ದಾನೆ.

ಸರ್ವಜ್ಞನೆಂಬುವನು ಗರ್ವದಿಂದಾವನೇ 
ಸರ್ವರೊಳಗೊಂದೊಂದು ನುಡಿಗಲಿತು, ವಿದ್ಯೆಯ
ಪರ್ವತವೇ ಆದ ಸರ್ವಜ್ಞ

ಕನ್ನಡ ವಚನಕಾರರಲ್ಲಿ, ಸರ್ವಜ್ಞ ಉನ್ನತ ಸ್ಥಾನದಲ್ಲಿ ಅಚ್ಚಳಿಯದ ರೂಪದಲ್ಲಿ ನಿಂತಿದ್ದಾನೆ. ತತ್ವ, ಸತ್ವಗಳ ರೂಪದಲ್ಲಿ ಅವನ ಗುರಿ ಲೋಕ ಕಲ್ಯಾಣ ಕಾರ್ಯವೇ ಆಗಿದೆ. ನನಗೆ ಗೊತ್ತಿರುವ ಒಂದಿಷ್ಟು ವಚನಗಳು ಇಲ್ಲಿವೆ.

ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ 
ಜಾತಿ-ವಿಜಾತಿ ಎನಬೇಡ, ದೇವನೊಲಿ
ದಾತನೇ ಜಾತ, ಸರ್ವಜ್ಞ

ಜ್ಯೋತಿ ಎಂದರೆ ದೀಪದ ಬೆಳಕು. ಜಾತಿಯವನಿರಲಿ, ಜಾತಿಹೀನನಿರಲಿ, ಎಲ್ಲರ ಮನೆಯಲ್ಲಿ ಒಂದೇ ರೀತಿ ಬೆಳಗುವದು. ಆ ಬೆಳಕಿಗೆ ಆ ಜಾತಿ, ಈ ಜಾತಿ ಎಂಬ ಭೇದ ಭಾವ ಇಲ್ಲ. ಯಾವ ಜಾತಿಯವನೇ ಆಗಲಿ, ದೇವರು ಅವನಿಗೆ ಒಲಿದಿದ್ದರೆ, ಅಂತಹವನೇ ಕುಲೀನನೆಂದು ತಿಳಿ.

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ 
ಕೊಟ್ಟಿದ್ದು ಕೆಟ್ಟಿತೆನಬೇಡ, ಮುಂದೆ
ಕಟ್ಟಿಹುದು ಬುತ್ತಿ, ಸರ್ವಜ್ಞ

ಕೈಯಾರೆ ದಾನ ಮಾಡಿದಾಗ, ಅದರ ಫಲ ದಾನಿಗೆ ದೊರೆಯುವದು. ಹಾಗೆ ದಾನಮಾಡದೆ, ಅವಶ್ಯಕತೆಯಿರುವವರಿಗೆ ಕೊಡದೆ, ಬಚ್ಚಿಟ್ಟರೆ, ಅದು ಒಂದಲ್ಲಾ ಒಂದು ದಿನ ಪರರ ಪಾಲಾಗುವದು. ದಾನ ಮಾಡಿದ ನಂತರ, ಕಳೆದುಕೊಂಡೆ ಎನ್ನುವ ಭಾವನೆ ಬೇಡ. ಏಕೆಂದರೆ ದಾನಿಗೆ ದಾನದ ಶ್ರೇಷ್ಠ ಫಲ, ಸ್ವರ್ಗದಲ್ಲಿ ಮೀಸಲಿರುತ್ತದೆ.

ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು 
ಸುಡುವಗ್ನಿಯೊಂದೆ ಇರುತಿರಲು, ಕುಲಗೋತ್ರ
ನಡುವೆಯತ್ತಣದು ಸರ್ವಜ್ಞ

ಮಾನವರಾದ ನಾವೆಲ್ಲರೂ ಒಂದೇ ಭೂಮಿಯ ಮೇಲೆ ಓಡಾಡುತ್ತಿದ್ದೇವೆ. ಒಂದೇ ನೆಲದ ನೀರನ್ನು ಕುಡಿಯುತ್ತಿದ್ದೇವೆ. ಸುಡುವ ಬೆಂಕಿಯೂ ಸಹ ಮಾನವರನ್ನು ಸುಡುವಾಗ, ಅವನದೊಂದು ಜಾತಿ, ಇವನದೊಂದು ಜಾತಿ ಎಂದು ಭೇದ ಎಣಿಸದು. ಹೀಗಿರುವಾಗ ಮಾನವರಲ್ಲಿ, ಕುಲಗೋತ್ರಗಳೆಂಬ ಇಲ್ಲಸಲ್ಲದ ಭೇದ ಭಾವನೆ ಹೇಗೆ ಮೂಡುತ್ತದೆ.

ಅನ್ನದಾನಗಳಿಗಿಂತ ಮುನ್ನ ದಾನಗಳಿಲ್ಲ 
ಅನ್ನಕ್ಕೆ ಮಿಗಿಲು ಇನ್ನಿಲ್ಲ, ಜಗದೊಳಗೆ
ಅನ್ನವೇ ಪ್ರಾಣ ಸರ್ವಜ್ಞ

ಸಕಲ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಲೇಸು ಎಂಬಂತೆ, ಸಕಲ ದಾನಗಳಲ್ಲಿ ಅನ್ನದಾನವೇ ಶ್ರೇಷ್ಠ. ಈ ಜಗತ್ತಿನಲ್ಲಿ ಅನ್ನವೇ ಎಲ್ಲರಿಗೂ ಪ್ರಾಣ ಆದ್ದರಿಂದ ಅನ್ನಕ್ಕಿಂತ ಮಿಗಿಲೆನಿಸುವ ದಾನ ಜಗತ್ತಿನಲ್ಲಿ ಬೇರೊಂದಿಲ್ಲ.

ವೈರಾಗ್ಯನಿಧಿ ಅಕ್ಕಮಹಾದೇವಿ

ಅಕ್ಕಮಹಾದೇವಿ ಸಮರ್ಪಣಭಾವದ ಸಂಪತ್ತು, ಸನ್ಯಾಸ ಯೋಗದ ಸತ್ವ, ಅನುಭಾವದ ಅಭಿವ್ಯಕ್ತಿ, ಮರ್ತ್ಯಕ್ಕೆ ಬಂದು ಕಾಲ ಕರ್ಮ ಮಾಯೆಗಳನ್ನು ಗೆದ್ದು ಹೊಸ ವಿಕ್ರಮ ಸ್ಥಾಪಿಸಿದ ವೀರ ವಿರಾಗಿಣಿ. ಹನ್ನೆರಡನೆಯ ಶತಮಾನದ ಈ ಕವಿಕೋಗಿಲೆ ಯುಗಯುಗಾಂತರಗಳ ಅನುಭವ ಸಂಪತ್ತಿನ ಧರ್ಮದರ್ಶಿ. ಎಂದು ಗೊ. ರು. ಚನ್ನಬಸಪ್ಪನವರು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಬಸವಣ್ಣನ ನೋಟದಲ್ಲಿ ಮಹಾದೇವಿಯಕ್ಕ

ಕಾಯದ ಲಜ್ಜೆಯ ಕಲ್ಪಿತವ ಕಳೆದು 
ಜೀವದ ಲಜ್ಜೆಯ ಮೋಹವನಳಿದು
ಮನದ ಲಜ್ಜೆಯ ನೆನಹ ಸುಟ್ಟು
ಭಾವದ ಕೂಟ ಬತ್ತಲೆಯೆಂದರಿದು
ತವಕ ಸ್ನೇಹ ವ್ಯವಹಾರಕ್ಕೆ ಹೋಗದು
ಕೂಡಲಸಂಗಮದೇವಯ್ಯ
ಎನ್ನ ಹೆತ್ತ ತಾಯಿ ಮಹಾದೇವಿಯಕ್ಕನ
ನಿಲವ ನೋಡಾ ಪ್ರಭುವೇ

ರೂಪಿಲ್ಲದವOಗೆ ಒಲಿದವರಿಂಗೆ
ತನುವಿನ ಹಂಗುಂಟೆ!
ಮನವಿಲ್ಲದವOಗೆ ಮೆಚ್ಚಿದವರಿಂಗೆ
ಅಭಿಮಾನದ ಹಂಗುOಟೆ!
ದಿಗಂಬರಂಗೆ ಒಲಿದವರಿಂಗೆ
ಕೌಪಿನದ ಹಂಗುಂಟೆ!
ಕೂಡಲ ಸಂಗಮದೇವಯ್ಯ
ಮಹಾದೇವಿ ಎಂಬ ಭಕ್ತೆಗೆ
ಯಾವ ಹೊರೆಯೂ ಇಲ್ಲ.


ಸಿದ್ಧರಾಮಯ್ಯ ಕಂಡ ಮಹಾದೇವಿಯಕ್ಕ

ಅಹುದಹುದು ಮತ್ತೇನು? 
ಮರಹಿಂಗೆ ಹಿರಿದು ಕಿರುದುಂಟಲ್ಲದೆ
ಅರಿವಿOಗೆ ಹಿರಿದು ಕಿರಿದುಂಟೆ ಹೇಳಯ್ಯ?
ಸಾವುಳ್ಳವOಗೆ ಭಯ ಉಂಟಲ್ಲದೆ
ಅಜಾತOಗೆ ಭಯ ಉಂಟೆ ಹೇಳಯ್ಯ?
ಕಪಿಲಸಿದ್ಧ ಮಲ್ಲಿನಾಥನಲ್ಲಿ
ಮಹಾದೇವಿಯಕ್ಕನ ನಿಲುವಿಂಗೆ
ಶರಣೆOದು ಶುದ್ಧನಾದೆನು ಕಾಣಾ ಚೆನ್ನಬಸವಣ್ಣ

ಪ್ರಭುದೇವರು ಕಂಡ ಮಹಾದೇವಿಯಕ್ಕ

ಅಂಗೈಯ ಲಿಂಗದಲಿ ಕಂಗಳ ನೋಟವೆ 
ಸ್ವಯವಾದ ಇರವ ನೋಡಾ
ತನ್ನ ಸ್ವಾನುಭಾವದ ಉದಯದಿಂದ
ತನ್ನ ತಾನರಿದ ನಿಜಶಕ್ತಿ ನೋಡಾ!
ಭಿನ್ನವಿಲ್ಲದರಿವು ಮನ್ನಣೆಯ ಮಮಕಾರವ
ಮೀರಿದ ಭಾವ ತನ್ನಿಂದ ತಾನಾದಳು!
ನಮ್ಮ ಗುಹೇಶ್ವರ ಲಿಂಗದಲ್ಲಿ
ಮಹಾದೇವಿಯಕ್ಕನ ನಿಲುವಿಂಗೆ
ನಮೋ ನಮೋ ಎನುತಿರ್ದೇನು ಕಾಣಾ ಚೆನ್ನಬಸವಣ್ಣ

ತನುಗುಣ ನಾಸ್ತಿಯಾಗಿ ಲಿಂಗಸಂಗಿಯಾದಳು
ಮನಗುಣ ನಾಸ್ತಿಯಾಗಿ ಅರಿವು ಸಂಗಿಯಾದಳು
ಭಾವಗುಣ ನಾಸ್ತಿಯಾಗಿ ಮಹಾಪ್ರಭೆ ತಾನಾದಳು
ತಾನಿದಿರೆಂಬೆರಡವಳಿದು ನಮ್ಮ ಗುಹೇಶ್ವರ ಲಿಂಗದಲ್ಲಿ
ಸ್ವಯಂ ಲಿಂಗವಾದ ಮಹಾದೇವಿಯಕ್ಕನ
ನಿಲವಿಂಗೆ ಶರಣೆನುರ್ತಿದ್ದೆನು

ಆದಿಶಕ್ತಿ ಅನಾದಿ ಶಕ್ತಿ ಎಂಬರು
ಆದಿಶಕ್ತಿ ಎಂದರೆ ಕುರುಹಿಂಗೆ ಬಂದಿತ್ತು
ಅನಾದಿ ಶಕ್ತಿ ಎಂದರೆ ನಾಮಕ್ಕೆ ಬಂದಿತ್ತು
ಆದಿಯಲ್ಲ, ಅನಾದಿಯಲ್ಲ
ನಾಮವಿಲ್ಲದ ಸೀಮೆಯಿಲ್ಲದ
ನಿಜಭಕ್ತಿಯೇ ನಿಜಶಕ್ತಿಯಾಗಿತ್ತು ನೋಡಾ
ಅಂತರಂಗದ ಪ್ರಭೆ ಭಹಿರಂಗವೆಲ್ಲ ತಾನೆಯಾಗಿ
ಗುಹೇಶ್ವರಲಿಂಗದಲ್ಲಿ ಸಂದಿಲ್ಲದಿಪ್ಪ
ಮಹಾದೇವಿಯಕ್ಕನ ಶ್ರೀಪಾದಕ್ಕೆ
ನಮೋ ನಮೋ ಎಂದೆನು.


ಚೆನ್ನಬಸವಣ್ಣನು ಕಂಡ ಮಹಾದೇವಿಯಕ್ಕ

ಆದ್ಯರ ಅರವತ್ತು ವಚನಕ್ಕೆ 
ದಣ್ಣಾಯಕರ ಇಪ್ಪತ್ತು ವಚನ!
ದಣ್ಣಾಯಕರ ಇಪ್ಪತ್ತು ವಚನಕ್ಕೆ
ಪ್ರಭುದೇವರ ಹತ್ತು ವಚನ!
ಅಜಗಣ್ಣನ ಐದು ವಚನ!
ಅಜಗಣ್ಣನ ಐದು ವಚನಕ್ಕೆ
ಕೂಡಲ ಚೆನ್ನಸಂಗಯ್ಯನಲ್ಲಿ
ಮಹಾದೇವಿಯಕ್ಕನ ಒಂದು ವಚನ ನಿರ್ವಚನ
ಕಾಣಾ ಸಿದ್ಧರಾಮಯ್ಯ!

ಅಜಕಲ್ಪ ಕೋಟಿ ವರ್ಷದವರೆಲ್ಲರೂ ಹಿರಿಯರೆ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೆ?
ನಡು ಮುರಿದು ಗುಡುಗೂರಿ ತಲೆ ನಡುಗಿದವರೆಲ್ಲ
ಹಿರಿಯರೆ ನರೆತರೆ ಹೆಚ್ಚಿ ಮತಿಗೆಟ್ಟು
ಒಂದನಾಡನೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರು ಹಿರಿಯರೆ?
ಅನುವನರಿದು ಘನವ ಬೆರೆಸಿ ಹಿರಿದು ಕಿರಿದೆಂಬ
ಭೇಧವ ಮರದು, ಕೂಡಲ ಚೆನ್ನಸಂಗಯ್ಯನಲ್ಲಿ
ಬರೆಸಿ ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕOಗಾಯಿತ್ತು ಕೇಳಾ ಪ್ರಭುವೇ !
ಮಡಿವಾಳ ಮಾಚಿದೇವರು ಕಂಡ ಮಹಾದೇವಿಯಕ್ಕ

ಕಾಮಿಯಾಗಿ ನಿ:ಕಾಮಿಯಾದಳು 
ಸೀಮೆಯಲ್ಲಿರ್ದು ನಿ:ಸ್ಸಿಮೆಯಾದಳು
ಭವಿಯ ಸಂಗವ ತೊರೆದು
ಭವಭಾಧೆಯ ಹರಿದಳು
ಬಸವಣ್ಣ ಗತಿಯೆಂದು ಬರಲು
ನಾನು ಮಡಿಯ ಹಾಸಿ ನಡೆಸಿದೆನು
ನಡೆವುದಕ್ಕೆ ಹಾಸಿದ ಮಡಿಯ
ಸರ್ವಾOಗಕ್ಕೆ ಹೊದ್ದಳು
ಆ ಮಡಿಯ ಬೆಳಗಿನ ಬೆಳಗಿನೊಳಗೆ
ನಿರ್ವಯಳಾದಳು!
ಕಲಿದೇವ, ಮಹಾದೇವಿಯಕ್ಕನ ನಿಲವ
ಬಸವಣ್ಣನ ಕೃಪೆಯಿಂದ ಅರಿದೆನಯ್ಯ ಪ್ರಭುವೆ

ಕಂಗಳ ನೋಟ ಕರಸ್ಥಲದಲ್ಲಿ
ಪ್ರಾಣನ ಕೂಟ ಅಂತರಂಗದ ಅರಿವಿನಲ್ಲಿ
ಅಂಗವಿಕಾರ ನಿರ್ವಿಕಾರವಾಯಿತ್ತು
ಕರಣದ ಸಂಗಸುಖ ನಿಸ್ಸOಗವಾಯಿತ್ತು
ಹೇಂಗೂಸೆOಬ ಭಾವ ಬಯಲ ಬೆರೆಸಿತ್ತು
ಕಲಿದೇವರ ದೇವ ನಿಮ್ಮ ಒಲಿಸಿ ಇಚ್ಚಿತವಾದ
ಮಹಾದೇವಿಯಕ್ಕನ ಪಾದವ ನೆನೆದು
ನಾನು ಬದುಕಿದೆನು


ಡಾ. ಜ. ಚ. ನಿ ಅವರ ದೃಷ್ಟಿಯಲ್ಲಿ ಮಹಾದೇವಿಯಕ್ಕ

ನನ್ನ ದೀಕ್ಷಾ ಗುರು ಕನ್ನಡದ ಸಾಹಿತ್ಯಕ್ಕೆ ಅಮೂಲ್ಯ ನುಡಿಗಟ್ಟುಗಳನ್ನು ನೀಡಿರುವ ಶ್ರೀ ನಿಡುಮಾಮಿಡಿ ಸಂಸ್ಥಾನದ ಲಿಂಗೈಕ್ಯ ಸ್ವಾಮೀಜಿಯವರಾದ ಡಾ. ಜ. ಚ. ನಿ ಯವರು ಅಕ್ಕಮಹಾದೇವಿಯನ್ನು ಕುರಿತು ಆಳವಾಗಿ ಅಧ್ಯಯನ ಮಾಡಿದ್ದಾರೆ.ಶಿವಯೋಗಾಶ್ರಮದಲ್ಲಿದ್ದಾಗ ಚಂದ್ರಶೇಖರ ದೇವರಾಗಿ ಅಕ್ಕನ ಕುರಿತು ಕಿರುಕೃತಿಯನ್ನು ಬರೆದಿದ್ದ ಜ. ಚ. ನಿ ಯವರು ಉದ್ದಕ್ಕೂ ಅಕ್ಕನ ಕುರಿತು ಹಲವು ಅಮೂಲ್ಯ ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ 
ಲೇಖನಿಯ ಒಂದು ಹನಿ ಇಲ್ಲಿದೆ.

ಮಹಾದೇವಿ ಮರ್ತ್ಯರ ಜೊತೆಗಿದ್ದು ಅಮರ್ತ್ಯಳಾದವಳು. ಅವಳು ಈ ಲೋಕದ ಆಟದಲ್ಲಿ ತೊಡಗಲಿಲ್ಲ. ಈ ನೋಟ ಅವಳಿಗೆ ಹಿಡಿಸಲಿಲ್ಲ. ಈ ಊಟಕ್ಕೆ ಅವಳ ನಾಲಿಗೆ ಎಳಸಲಿಲ್ಲ. ಅವಳು ಲೋಹದ ಮುಸುಕನ್ನು ತೆರೆಯಬಂದವಳು. ಮಹಿಳಾ ಲೋಕದ ಉದ್ಧಾರಕ್ಕಾಗಿ ಉದಯಿಸಿದವಳು. ಪ್ರಭು ದರ್ಶನಕ್ಕಾಗಿ, ಪ್ರಭುವಿನ ಅನುಗ್ರಹಕ್ಕಾಗಿ ಆಗಮಿಸಿದವಳು. ಆ ಮಹಾಪ್ರಭುವಿನ ಮಹಾಪ್ರಕಾಶ ಪ್ರಬಾತದಲ್ಲಿ ಜಾಗೃತಳಾಗಿ ಜೀವಿಸಬಂದವಳು.

ಮಾದೇವಿಗೆ ಈ ಲೋಕ ಹೊಸದಲ್ಲ. ಈ ಲೋಕದ ಆಗುಹೋಗುಗಳು, ಸುಖ -ಸೌಲಭ್ಯಗಳು ಹೆಚ್ಚಿನವಲ್ಲ, ಮೆಚ್ಚಿನವಲ್ಲ. ಆಕೆ ದೇಶದ ಕಾಲಾತೀತವಾದ ಚಿತ್ಕಳಾದೀಪ್ತಿ: ಚಿರಂತನ ಶಕ್ತಿ. ಈ ಲೌಕಿಕಾನುಭವಕ್ಕೆ ಒಂದು ಹೊಸ ಮೆರುಗನ್ನು ದಿವ್ಯ ರೂಪವನ್ನು ಕೊಡುವ ಶಕ್ತಿ ಅವಳಲ್ಲಿತ್ತು

ಅಕ್ಕ ಈ ಲೋಕಕ್ಕೆ ಒಂದು ಹೊಚ್ಚ ಹೊಸ ಬೆಳಕನ್ನು ತಂದಳು, ತಂದು ತುಂಬಿದಳು. ತುದಿಮೊದಲಿಲ್ಲದೆ ತೊಳಗಿದಳು. ಕನ್ನಡ ನಾಡನ್ನು ಕೈಲಾಸವಾಗಿರಿಸಲು ಅವತರಿಸಿದಳು. ಅವಳು ಸತ್ಯಕ್ಕೂ ಸಚ್ಚತಕಳಾ ಸ್ವರೂಪಿಣಿ: ಭವ್ಯ ಭಾಮಿನಿ.

ಡಾ. ಜ. ಚ. ನಿ.

ಪುಸ್ತಕಗಳು

ಒಬ್ಬ ವ್ಯಕ್ತಿಯ ಜೀವನದಲ್ಲಿ ಪುಸ್ತಕಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಪುಸ್ತಕಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ. ಮನುಷ್ಯನನ್ನು ಜ್ಞಾನಿಯನ್ನಾಗಿ ಪಂಡಿತನನ್ನಾಗಿ ಲೋಕಚಿಂತಕನನ್ನಾಗಿ ಮಾಡುವ ಶಕ್ತಿ, ಸತ್ವ ಪುಸ್ತಕಗಳಿಗುಂಟು.

ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಪುಸ್ತಕ ಪ್ರೀತಿ ಮೂಡಿಸಬೇಕು. ಉತ್ತಮ ಪುಸ್ತಕಗಳು ಅವರ ಅತ್ತ್ಯುತ್ತಮ ಮಿತ್ರರು ಎಂಬುದನ್ನು ನಿತ್ಯ ನೆನಪಿಡಬೇಕು. ಮಕ್ಕಳ ಮುಂದಿನ ಬೆಳವಣಿಗೆಯಲ್ಲಿ ಪುಸ್ತಕಗಳು ಸುವರ್ಣ ದಾರಿಯನ್ನೇ ನಿರ್ಮಿಸುತ್ತವೆ. ಪುಸ್ತಕಗಳೇ ನಮ್ಮ ಸಂಪತ್ತು, ಅವುಗಳನ್ನು ಸಂವರಕ್ಷಿಸಿ ಕಾಪಾಡುವದು ನಮ್ಮ ಆದ್ಯ ಕರ್ತವ್ಯ ಎಂಬುದನ್ನು ಸದಾ ಮರೆಯಬಾರದು.

ಒಳ್ಳೆಯ ಪುಸ್ತಕದ ಓದು ಎಂದರೆ, ಬಟ್ಟೆಯನ್ನು ಸುಗಂಧದ ಪನ್ನೀರಿನಲ್ಲಿ ನೆನೆಸಿದಂತೆ. ಬಟ್ಟೆ ಒಣಗಿದರೂ ಪನ್ನೀರಿನ ಪರಿಮಳ ಉಳಿಯುವಂತೆ ಓದಿದ ಪುಸ್ತಕದ ಅಮೃತಸಾರ ಕೆಲಕಾಲ ಮನದಲ್ಲಿ ಉಳಿಯುವದು. ಒಂದು ಒಳ್ಳೆಯ ಪುಸ್ತಕದ ಲಾಭವೇನು ಎಂಬುದನ್ನು ಈ ತತ್ವಜ್ಞಾನಿ ತುಂಬ ಅರ್ಥಗರ್ಭಿತವಾಗಿ ಹೇಳಿದ್ದಾನೆ. ಪುಸ್ತಕಗಳು ಪರಿಮಳವೀಯಬೇಕು, ಪರಿಮಳದಿಂದ ಜನರ ದೃಷ್ಟಿ, ಪುಸ್ತಕ ಸಂಸ್ಕೃತಿಯತ್ತ ವಾಲುವಂತಾಗಬೇಕು. ಬಗೆ ಬಗೆಯಾದ, ಬಿಸಿ, ಬಿಸಿಯಾದ ತಿಂಡಿ ತಿನಿಸುಗಳಿಗೆ ನಮ್ಮ ಮನಸ್ಸು ಹಾತೊರೆಯುವಂತೆ ಉತ್ತಮ ಪುಸ್ತಕಗಳಿಗೂ ಹಾತೊರೆಯಬೇಕು.

ಎಷ್ಟು ಪುಸ್ತಕಗಳನ್ನು ಸಂಗ್ರಹಿಸಿದೆ, ಎಷ್ಟು ಓದಿದೆ, ಎಷ್ಟು ಸಮಯ ಓದಿದೆ ಎಂಬುದಕ್ಕಿಂತ ಓದಿದ ಒಡಲ ನ್ನು ಎಷ್ಟು ಅರಿತೆ ಎಂಬುದು ಬಹು ಮುಖ್ಯವಾದದ್ದು. ಆದುದರಿಂದ ಓದಿದ ಒಡಲಿನ ಜೊತೆಗೆ ಅದನ್ನು ಹೇಗೆ ಇತರರಿಗೆ ಅಭಿವ್ಯಕ್ತಿಗೊಳಿಸಿದೆ ಎಂಬುದೂ ಪ್ರಧಾನ ಅಂಶ ಎಂದು ಸರ್ವಜ್ಞ ತನ್ನ ತ್ರಿಪದಿಯಲ್ಲಿ ಹೇಳಿದ್ದಾನೆ.

ಅದೆಷ್ಟು ಜನ ಬಾಲ್ಯದಲ್ಲಿಯೇ ಪುಸ್ತಕಗಳಿಂದ ಪ್ರಬಾವಿತರಾಗಿ ಬೆಳೆದು, ದೊಡ್ಡವರಾಗಿ ಲೋಕಕ್ಕೆ ಬೆಳಕಾದರು ಎಂಬುದನ್ನು ನೆನೆದಾಗ ವ್ಯಕ್ತಿಯ ಜೀವನದಲ್ಲಿ ಪುಸ್ತಕಗಳಿಗಿಂತ ಬೇರೆ ಎನು ಬೇಕಾಗಿದೆ ಎಂದು ಪ್ರಶ್ನಿಸುವಂತಾಗಿದೆ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, Dr. ಬಿ. ಆರ್. ಅಂಬೇಡ್ಕರ್, Dr. ವಿ. ಕೆ. ಗೋಕಾಕ್, Dr. ಹಾ. ಮಾ. ನಾಯಕ್, Dr. ಸಿ. ಪಿ. ಕೆ ಅವರ ಎತ್ತರದ ವ್ಯಕ್ತಿತ್ವದಲ್ಲಿ ಪುಸ್ತಕಗಳ ಪಾತ್ರ ಬಹು ದೊಡ್ಡದು.

ಮನುಷ್ಯ ತನ್ನ ಮಕ್ಕಳಿಗೆ ಏನನ್ನಾದರು ಬಿಟ್ಟು ಹೋಗುವದಿದ್ದರೆ ಬ್ಯಾಂಕಿನ ಠೇವಣಿಯನ್ನಲ್ಲ, ಒಳ್ಳೆಯ ಪುಸ್ತಕಗಳಿಂದ ತುಂಬಿದ ಮನೆ, ಗ್ರಂಥಾಲಯವನ್ನು ಬಿಟ್ಟು ಹೋಗಬೇಕು. ಅದರಲ್ಲಿ ಮನುಷ್ಯನಿಗೆ ಬೇಕಾದುದೆಲ್ಲವು ಇರುತ್ತದೆ. ಪಾಟೀಲ್ ಪುಟ್ಟಪ್ಪನವರ ಈ ಸಂದೇಶ ಎಲ್ಲರ ಮನದ ಕದವನ್ನು ತೆಗೆಯುವಂಥ ಸಂದೇಶವಾಗಿದೆ. ಹಣ ಹಣ ಎಂದು ಬಡಬಡಿಸುತ್ತಿರುವ ಮನುಷ್ಯ ಆಸ್ತಿ ಆಸ್ತಿ ಎಂದು ಹೋರಾಡುತ್ತಿರುವ ಮನುಷ್ಯನಿಗೆ ಯಾವುದು ಆಸ್ತಿ, ಹೇಗೆ ಆಸ್ತಿಯನ್ನು ಮಾಡಬೇಕೆಂಬುದರ ಬಗ್ಗೆ ನಮ್ಮ ಕಣ್ಣಿನ ಪೊರೆಯನ್ನು ಕಳಚಲು ಸಹಕರಿಸುತ್ತದೆ.

ಒಳ್ಳೆಯ ಆಹಾರ ಮತ್ತು ಆರೋಗ್ಯವಿಲ್ಲದೆ ಹೇಗೆ ದೇಹವಿಕಾಸ ಸಾಧ್ಯವಿಲ್ಲವೊ ಹಾಗೆಯೇ ಉತ್ತಮ ಪುಸ್ತಕಗಳ ಒಡನಾಟವಿಲ್ಲದಿದ್ದರೆ ಜ್ಞಾನವಿಕಾಸ ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು. ನಮ್ಮ ಜೀವನದಲ್ಲಿ ಮೊದಲ ಹಾಗೂ ಕೊನೆಯ ಆದ್ಯತೆಯನ್ನು ಪುಸ್ತಕಗಳಿಗೆ ಕೊಟ್ಟಾಗಲೇ ನಾವು ಸುಖವಾಗಿರುವದು, ಸಂಪತ್ತನ್ನು ಪಡೆಯುವದು. ಪುಸ್ತಕಗಳಿಲ್ಲದೆ ಮನುಷ್ಯ ಮನುಷ್ಯನಾಗಲಾರ.

ಪುಸ್ತಕಗಳಿಲ್ಲದಿದ್ದರೆ ದೇವರೇ ಮೂಕನಾಗಿ ಬಿಡುತ್ತಾನೆ, ನ್ಯಾಯ ದೇವತೆ ನಿದ್ರಿಸುತ್ತಾಳೆ, ವಿಜ್ಞಾನ ಸ್ಥಗಿತಗೊಳ್ಳುತ್ತದೆ, ತತ್ವಜ್ಞಾನ ಕುಂಟುತ್ತದೆ, ಸಾಹಿತ್ಯ ಅರ್ಥಹೀನ ವಾಗುವದು, ಉಳಿದೆಲ್ಲವೂ ಅಂಧಕಾರದಲ್ಲಿ ಅಡಗಿಬಿಡುತ್ತದೆ, ಎಂಬ ಮಾತು ಪುಸ್ತಕಗಳ ಮಹತ್ವವನ್ನು ಸಾರುತ್ತದೆ.

ಸುಶಿ