ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆಯಲ್ಲಿ, ಕನ್ನಡ ಮಾತೃಭಾಷೆಯಾಗಿ, ಕನ್ನಡ ನಾಡಿನ ಸಾಹಿತಿಗಳಾಗಿ ಸಂಸ್ಕೃತದಲ್ಲಿ ಕಾವ್ಯ ರಚಿಸಿದ ಇಬ್ಬರು ಕವಿಯಿತ್ರಿಯರು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಕ್ರಿ. ಶ. ಏಳನೆಯ ಶತಮಾನದ ವಿಜಯಕ್ಕ ಎಂಬ ಕನ್ನಡತಿ, ಸಂಸ್ಕೃತದಲ್ಲಿ “ಕೌಮುದಿ ಮಹೋತ್ಸವ ” ಎಂಬ ಐದು ಅಂಕಗಳ ನಾಟಕವನ್ನು ರಚಿಸಿದಳು. ಈಕೆಯ ವಿದ್ವತ್ತನ್ನು ಅನಂತರದ ಕಾವ್ಯಮೀಮಾOಸಕರೂ ಕವಿಗಳೂ ಸ್ತುತಿಸಿದ್ದಾರೆ. ಕರ್ನಾಟಕವನ್ನು ಆಳಿದ ಬಾದಾಮಿ ಚಾಲುಕ್ಯರ ಕುಲಶೇಖರನಾದ ಪ್ರಸಿದ್ದ ಇಮ್ಮಡಿ ಪುಲಿಕೇಶಿಯ ಮಗ ಚಂದ್ರಾದಿತ್ಯನ ರಾಣಿಯೇ ಈ ವಿಜಯಾಬಿಕೆ.

ಸೇನಾನಿ ಕಂಪಣ್ಣೊಡೆಯನ ಧರ್ಮಪತ್ನಿ ಗಂಗಾದೇವಿಯು (ಕ್ರಿ. ಶ. 1372)ತನ್ನ ಪತಿಯ ದಿಗ್ವಿಜಯಗಳಲ್ಲಿ ಜೊತೆಗಿದ್ದು ಆ ಯುದ್ಧಾನುಭವಗಳನ್ನು ” ಮಧುರಾ ವಿಜಯo” (ವೀರ ಕಂಪಣಾಚಾರ್ಯ ಚರಿತಂ ) ಎಂಬ ಸಂಸ್ಕೃತ ಕಾವ್ಯದಲ್ಲಿ ಬಿತ್ತರಿಸಿದ್ದಾಳೆ. ಕನ್ನಡ ಮಹಿಳೆಯರು ಸಂಸ್ಕೃತ-ಪ್ರಾಕೃತಾದಿ ಇತರ ಭಾಷೆಗಳಲ್ಲಿ, ಅಗಾಧವೆನ್ನಬಹುದಾದ ಪಾಂಡಿತ್ಯ ಸಾಧಿಸಿದ್ದರು ಎನ್ನುವದಕ್ಕೆ ಇವರಿಬ್ಬರೂ ದೃಷ್ಟಾಂತವಾಗಿ ನಿಲ್ಲುತ್ತಾರೆ, ಎಂದು ಕಮಲಾ ಹಂಪನಾ ಅವರು ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ.
ಹನ್ನೆರಡನೆಯ ಶತಮಾನದ ಮೇರು ಮಂದಾರವಾಗಿ ವಚನಸಾಹಿತ್ಯದಲ್ಲಿ ನೆಲೆನಿಂತವಳು ಕವಿಯಿತ್ರಿ ಅಕ್ಕಮಹಾದೇವಿ. ಈಕೆ ವಚನ ಸಾಮ್ರಾಜ್ನಿಯಾಗಿ ಮೆರೆದವಳು. ಈಕೆಯ ಸಮಕಾಲೀನರಾದ ನೂರಾರು ವಚನಗಾರ್ತಿಯರು ಕನ್ನಡ ಸಾಹಿತ್ಯದ ಸಂಪತ್ತನ್ನು ಶ್ರೀಮಂತಗೊಳಿಸಿದ್ದಾರೆ. ಅದರಲ್ಲಿ ಅಕ್ಕನಾಗಮ್ಮ ಸಹ ಒಬ್ಬಳು.
ಇದೇ ಕಾಲದಲ್ಲಿ ಜೀವಿಸಿದ್ದ ಮತ್ತೊಬ್ಬ ಕವಿಯಿತ್ರಿ ಎಂದರೆ ಜಕ್ಕಲಾOಬ. ಈಕೆ ಬರೆದ ಕಾವ್ಯದ ಹೆಸರು #ಗುಣಾoಕ ಮಾಲೆ ಚರಿತೆ “. ಇದು ಅನುಪಲಭ್ದ ಕಾವ್ಯ. ಷಟ್ಪದಿ ಚಂದಸ್ಸಿನಲ್ಲಿ ರಚಿತವಾಗಿತ್ತೆಂದು ತಿಳಿಯಬಹುದು.
ಚಂದನಾoಬಿಕೆಯ ಕಥೆ” ಎನ್ನುವ ತ್ರಿಪದಿ ಕಾವ್ಯ, ಅಜ್ಞಾತ ಕವಿಯಿತ್ರಿಯ ಕಥನ ಕಾವ್ಯ. ಐತಿಹಾಸಿಕ ವ್ಯಕ್ತಿಯಾದ ಭಗವಾನ ಮಹಾವೀರರ ಚಿಕ್ಕಮ್ಮ ಹಾಗೂ ಮೂವತ್ತಾರು ಸಾವಿರ ಆರ್ಜಿಕೆಯರ ನೇತೃತ್ವ ವಹಿಸಿದ್ದ ಚಂದನಬಾಲೆಯ ಜೀವನಚರಿತ್ರೆ ಈ ಕಾವ್ಯದ ವಸ್ತು. ಮಹಿಳೆಯೊಬ್ಬಳು ತ್ರಿಪದಿ ಛಂದಸ್ಸಿನಲ್ಲಿ ರಚಿಸಿದ ಏಕೈಕ ಕಾವ್ಯವೆಂಬ ಹೆಗ್ಗಳಿಕೆ ಈ ಕೃತಿಯದು . ಇದರ ಕಾಲ ಹದಿನೈದನೆಯ ಶತಮಾನ.
ಕನ್ನಡ ಸಾಹಿತ್ಯದ ಮೊಟ್ಟಮೊದಲ ಏಕೈಕ ಪ್ರಮುಖ ಚಂಪೂ ಕವಿಯಿತ್ರಿ ಎಂದರೆ ನಾಗಲದೇವಿ (ಕ್ರಿ. ಶ. 1431-1462) ತನ್ನ ಕಾವ್ಯವನ್ನು ಚಂಪೂ ಶೈಲಿಯಲ್ಲಿ ರಚಿಸಿ, ತನ್ನ ಕನ್ನಡ ಭಾಷೆಯ ಪ್ರೀತಿಯನ್ನು, ತನ್ನ ಕಾವ್ಯದಲ್ಲಿ ಸ್ಪುರಿಸಿರುವ ನಾಗಲದೇವಿ ಒಬ್ಬ ಅನನ್ಯ ಕವಿಯಿತ್ರಿ.
ಅನಂತರದ ಕವಿಯಿತ್ರಿ ಸಂಚಿ ಹೊನ್ನಮ್ಮ. “ಹದಿಬದೆಯ ಧರ್ಮ ” ಎನ್ನುವ ವಿಶಿಷ್ಟ ಕಾವ್ಯವನ್ನು ಸಾಂಗತ್ಯ ಛಂದಸ್ಸಿ ನಲ್ಲಿ ರಚಿಸಿದ ಹಿರಿಮೆ ಈಕೆಯದು. “ಪೆಣ್ಣು ಪೆಣ್ಣೆoದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ” ಎಂದು ಬಂಡಾಯದ ಧ್ವನಿ ಎತ್ತಿದ ಕವಿಯಿತ್ರಿ
ಹೆಳವನಕಟ್ಟೆ ಗಿರಿಯಮ್ಮ ಬಹುಮುಖ ಪ್ರತಿಭೆಯ ಕವಿಯಿತ್ರಿ. ದೇವರನಾಮ, ಭಕ್ತಿಗೀತೆಗಳು ಹಾಗೂ ಕಾವ್ಯಗಳನ್ನು ರಚಿಸಿದ ಭಕ್ತಿ ಭಾವದ ಕವಿಯಿತ್ರಿ. ಇದೇ ಸಾಲಿಗೆ ಸೇರಿದ ಮತ್ತೊಬ್ಬ ಕವಿಯಿತ್ರಿ ಶೃಂಗಾರಮ್ಮ.
ಇಪ್ಪತ್ತನೆಯ ಶತಮಾನದಲ್ಲಿ ಆಧುನಿಕ ಸಾಹಿತ್ಯಕ್ಕೆ ಅಡಿಗಲ್ಲು ಇಟ್ಟವರು ನಂಜನಗೂಡಿನ ತಿರುಮಲಾoಬಾ, ಬೆಳಗೆರೆ ಜಾನಕಮ್ಮ, ಸೀತಾ ಪಡುಕೋಣೆ, ಗಿರಿಬಾಲೆ, ಆರ್. ಕಲ್ಯಾಣಮ್ಮ, ತಿರುಮಲೆ ರಾಜಮ್ಮ ಮೊದಲಾದವರು.
ಸ್ವಲ್ಪ ನಂತರದ ಕಾಲದ ಜಯದೇವಿ ತಾಯಿ ಲಿಗಾಡೆ ಅವರು “ಶ್ರೀ ಸಿದ್ದರಾಮ ಚರಿತೆ ” ಹಾಗೂ ಶ್ರೀಮತಿ ಮಲ್ಲಿಕಾ ಅವರು “ಸ್ವಾಮಿ ವಿವೇಕಾನಂದರ ಜೀವನಗಾಥಾ ” ಮಹಾಕಾವ್ಯಗಳನ್ನು ರಚಿಸಿದರು.
ಇಪ್ಪತ್ತನೆಯ ಶತಮಾನ, ಲೇಖಕಿಯರ ಸುಗ್ಗಿಯ ಕಾಲವೆಂದು ಹೇಳಬಹುದು. ಈ ಶತಮಾನದ ಕಡೆಯ ಭಾಗದಲ್ಲಿ ಲೇಖಕಿಯರ ಸಾಹಿತ್ಯ ಕೃಷಿ ಗಣನೀಯವಾದುದು. (1975-2000) ಲೇಖಕಿಯರು ವಿವಿಧ ಆಯಾಮಗಳ, ವಿವಿಧ ಬಗೆಯ ಬರಹಕ್ಕೆ ಒಳಗೊಂಡಿರುವದು ಒಂದು ಆರೋಗ್ಯಕರ ಬೆಳವಣಿಗೆ ಆಕೆಗೆ ದೊರೆತ ಉನ್ನತ ಶಿಕ್ಷಣ, ಬೇರೆ ಬೇರೆ ಕ್ಷೇತ್ರಗಳಲ್ಲಿನ ಉದ್ಯೋಗದ ಅನುಭವ, ಆರ್ಥಿಕ ಸ್ವಾತಂತ್ರ್ಯ, ಪತ್ರಿಕೆಗಳ ಪ್ರೋತ್ಸಾಹ, ಸಹೃದಯ ಓದುಗರು.. ಹೀಗೆ ಹಲವು ಹತ್ತು ರೀತಿಯಿಂದ ದೊರೆತ ಉತ್ತೇಜನ, ಲೇಖಕಿಯರನ್ನು ಮೌಲಿಕ ಕೃತಿಗಳನ್ನು ರಚಿಸುವತ್ತ ಪ್ರೇರೆಪಿಸಿದೆ.
ಅನಂತರದ ಕವಿಯಿತ್ರಿಯರ ಸಾಲು ದೊಡ್ಡದು. ಇಪ್ಪತ್ತೊoದನೆಯ ಶತಮಾನದಲ್ಲಿ ಭಗವಾನ್ ಬುದ್ಧರನ್ನು ಕುರಿತ “ಬುದ್ಧ ಮಹಾಕಾವ್ಯ ” ಡಾ ಲತಾ ರಾಜಶೇಖರ್ ಅವರ ಮುಖ್ಯ ಕೊಡುಗೆ. ಹೀಗೆ ಸಾಗುತ್ತಲೇ ಇರುತ್ತದೆ, ಮಹಿಳಾ ಸಾಹಿತಿಗಳ ಅಮೋಘ ರಚನೆಗಳು.
ಸುಶಿ