ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು| ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ || ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ| ಎಲ್ಲರೊಳಗೊಂದಾಗು -ಮಂಕುತಿಮ್ಮ
ಬೆಟ್ಟದಡಿಯಲ್ಲಿ ಹುಲ್ಲಾಗು, ಮನೆಗೆ ಮಲ್ಲಿಗೆಯ ಹೂವಾಗು. ವಿಧಿಯು ಕಷ್ಟಗಳೆಂಬ ಮಳೆ ಸುರಿಸಿದಾಗ ಕಲ್ಲಾಗು. ದೀನದುರ್ಬಲರ ಪಾಲಿಗೆ ನೀನು ಬೆಲ್ಲ ಸಕ್ಕರೆಯಾಗು. ಎಲ್ಲ ಜನರೊಂದಿಗೆ ಸದಾ ಒಂದಾಗಿರು.
ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು | ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ || ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ | ಜಸವು ಜನಜೀವನಕೆ -ಮಂಕುತಿಮ್ಮ||
ಹಳೆಯ ಬೇರಿನಿಂದ ಕೂಡಿದ ಮರ, ಹೊಸ ಚಿಗುರಿನಿಂದ ಕೂಡಿದಾಗ ನೋಡಲು ಸುಂದರವಾಗಿರುವುದು. ಹಳೆಯ ತತ್ವಗಳಿಂದ ಕೂಡಿದ ಧರ್ಮ ಹೊಸ ಯುಕ್ತಿಗಳಿಂದ ಕೂಡಿದರೆ, ಚೆನ್ನ. ಪ್ರಾಚೀನ ಋಷಿವಾಣಿಯೊಡನೆ ವಿಜ್ಞಾನ ಕಲೆ ಕೂಡಿದರೆ ಜನಜೀವನ ಹುಲುಸಾಗುತ್ತದೆ.
ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ | ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು || ಮದುವೆಗೋ, ಮಸಣಕೋ ಹೋಗೆಂದ ಕಡೆಗೋಡು | ಪದ ಕುಸಿಯೆ ನೆಲವಿಹುದು -ಮಂಕುತಿಮ್ಮ ||
ಮಾನವನ ಬದುಕೇ ಒಂದು ಜಟಕಾಬಂಡಿಯಂತೆ ವಿಧಿಯೇ ಬಂಡಿಯ ಸಾಹೇಬ. ವಿಧಿ ಹೇಳಿದಂತೆ ಪ್ರಯಾಣ ಸಾಗುತ್ತದೆ. ಮದುವೆಗೋ, ಸ್ಮಶಾನಕ್ಕೋ ಅದು ಹೇಳಿದ ಕಡೆಗೆ ಸಾಗಬೇಕು. ಅಡಿ ಸೋತಾಗ ನೆಲವೇ ನೆಲೆ
ನಾವೆಲ್ಲಾ ಚಿಕ್ಕವರಿದ್ದಾಗಿನಿಂದ ಜನಮನದಲ್ಲಿ ಹಾಸುಹೊಕ್ಕಾಗಿರುವ ಮೇಲಿನ ಕಗ್ಗಗಳಲ್ಲಿ ಜೀವನ ತತ್ವ, ಜ್ಞಾನ -ವಿಜ್ಞಾನಗಳ ಸಾಮರಸ್ಯ ಮಾನವನ ಬದುಕಿನ ಚಿತ್ರಣಗಳಿವೆ. “ಕನ್ನಡದ ಭಗವದ್ಗೀತೆ ” ಎಂದೇ ಹೆಸರಾಗಿರುವ “ಮಂಕುತಿಮ್ಮನ ಕಗ್ಗ ” ಯುಗದ ಕವಿ, ಜಗದ ಕವಿ ಡಿ. ವಿ. ಜಿ ಅವರ ಮೇರುಕೃತಿ. ಕನ್ನಡ ಸಾರಸ್ವತ ಲೋಕದ ಅಮರಕೃತಿ.
ಹೊಸ ವರ್ಷದ ಶುಭ ದಿನದಂದು ನನ್ನ ನೆಚ್ಚಿನ ಕವಿಗಳಲ್ಲಿ ಒಬ್ಬರಾದ ಕುವೆಂಪು ಅವರ ಕವನವನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ
ಸುಂದರವಾಗಿರು: ಈ ಸೌಂದರ್ಯ, ನಿನಗದೆ ಬಾಳಿನ ಸರ್ವೋತ್ತಮ ಕಾರ್ಯ ಸೌಂದರ್ಯವೆ ಶಿವಕರ್ತವ್ಯ ; ಸೌಂದರ್ಯವೆ ಸರ್ವೋತ್ತಮ ಗಂತವ್ಯ! ಸೌಂದರ್ಯವೆ ಸತ್, ಸೌಂದರ್ಯವೆ ಚಿತ್, ಸೌಂದರ್ಯವೆ ಆನಂದ: ಆ ಸಾಧನೆಗಾಗಿಯೆ ಈ ಸೃಷ್ಟಿಯಬಂಧ ಆ ಸಿದ್ಧಿಗೆ ಮೀಸಲು ಮುಕ್ತಿಯ ನಿತ್ಯಾನಂದ!
ಸುಂದರವಾಗಿರು: ಈ ಸೌಂದರ್ಯ, ಇಂದ್ರಿಯ ಸೌಂದರ್ಯ, ಪ್ರಾಣದ ಸೌಂದರ್ಯ, ಚಿತ್ತದ ಸೌಂದರ್ಯ, ಆತ್ಮದ ಸೌಂದರ್ಯ, ಈ ಸೌಂದರ್ಯವೆ ಜೀವನ ಪುರುಷಾರ್ಥದ ಶಿವಕರ್ತವ್ಯ: ಈ ಸೌಂದರ್ಯವೆ ಆ ಪುರುಷೋತ್ತಮ ಚಿರಗಂತವ್ಯ!
ಸುಂದರವಾಗಿರು: ಸೌಂದರ್ಯದ ಸೇವೆಯೆ ನೀ ಮಾಡುವ ಮಹದುಪಕಾರ! ಸುಂದರವಾಗಿರು: ಸೌಂದರ್ಯದಿ ಸಿದ್ಧಿಪುದಾ ಭಗವತ್ ಸಾಕ್ಷಾತ್ಕಾರ!
ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದ ರಲ್ಲಿ ಆರು ಪಾದಗಳಿದ್ದರೆ, ಅದು ಷಟ್ಪದಿ ಎನಿಸುತ್ತದೆ. ಪಾದ ಗಳ ಗಣ, ಮಾತ್ರಾ, ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸಿಕೊಳ್ಳುತ್ತದೆ.ಇದರ 1,2,4 ಮತ್ತು 5 ನೇ ಪಾದ ಗಳು ಪರಸ್ಪರ ಸಮನಾಗಿರುತ್ತವೆ. ಮೂರನೆಯ ಮತ್ತು ಆರನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ಮೂರನೆಯ ಪಾದ, ಒಂದನೆಯ ಪಾದದ ಒಂದೂವರೆ ಯಷ್ಟಿದ್ದು,ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ
ಪಾದ.... ಪಾದ ಎಂದರೆ ಪದ್ಯದ ಒಂದು ಸಾಲು
ಗಣ.... ಗಣ ಎಂದರೆ ಗುಂಪು. ಛಂದಸ್ಸಿನಲ್ಲಿ ಮಾತ್ರಾಗಣ, ಅಕ್ಷರಗಣ, ಅಂಶಗಣಗಳೆಂಬ ಮೂರು ವಿಧದ ಗಣಗಳಿವೆ.
ಮಾತ್ರಾಗಣ.... ಮಾತ್ರಾಗಣ ಎಂದರೆ, ಮಾತ್ರೆಗಳ ಆಧಾರದ ಮೇಲೆ ವಿಂಗಡಿಸಲಾದ ಗುಂಪು.
ಮಾತ್ರೆ.... ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವದು.
ಲಘು.... ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು(U) ಎನ್ನುವರು.
ಗುರು.... ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು (-)ಎಂದು ಕರೆಯುವರು.
ಪ್ರಸ್ತಾರ.... ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವದು ಎನ್ನುವರು.
ನಾನು ಇಲ್ಲಿ ಕುಸುಮ ಷಟ್ಪದಿಯ ಪ್ರಸ್ತಾಪವನ್ನು ಮಾಡುತ್ತಿದ್ದೇನೆ. ಕುಸುಮ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಗುರುಬಸವನ (1430)”ಮನೋವಿಜಯ “ಕಾವ್ಯ ಕುಸುಮ ಷಟ್ಪದಿಯಲ್ಲಿದೆ
1.. ಕುಸುಮ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ 2..1,2,4,5 ನೆಯ ಸಾಲುಗಳು ಸಮನಾಗಿದ್ದು, ಐದು ಮಾತ್ರೆಯ ಎರಡು ಗಣಗಳಿರುತ್ತವೆ. 3..3 ಮತ್ತು 6 ನೆಯ ಪಾದಗಳಲ್ಲಿ, ಐದು ಮಾತ್ರೆಯ ಮೂರು ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ.
‘|’ ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವದನ್ನು ಗಮನಿಸೋಣ.
ರುಬಾಯಿ ಅಥವಾ ರುಬಾಯತ್, ಇದೊಂದು ಪರ್ಶಿಯನ ಸಾಹಿತ್ಯದ ಪ್ರಕಾರ. ಇದು ನಾಲ್ಕು ಸಾಲುಗಳುಳ್ಳ ಪದ್ಯ. ಅರಬಿಯಲ್ಲಿ “ರುಬಿ ” ಎಂದರೆ ನಾಲ್ಕು. ರುಬಾಯಿ ಸುಮಾರು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಾಹಿತ್ಯ ಪ್ರಕಾರ. ಅರಬ್ ಕವಿ ಅಬ್ದುಲ್ ಹಸನ್ ರೂಡೆಕಿ ಅನ್ನುವ ಕವಿ ಮೊದಲಿಗೆ ರುಬಾಯಿ ರಚಿಸಿದನು ಎನ್ನುವ ಇತಿಹಾಸ ಇದೆ. ತದನಂತರ ಖ್ಯಾತಕವಿ, ತತ್ವಜ್ಞಾನಿ, ಗಣಿತಜ್ಞ ಖಗೋಳ ಶಾಸ್ತ್ರಜ್ಞನಾದ ಪರ್ಶಿಯಾದ ಉಮರ್ ಖಯ್ಯಾಮ್(1048-1133)ರಲ್ಲಿ ಇದನ್ನು ಪ್ರಸಿದ್ಧಗೊಳಿಸಿದ.
ಇವನು ಸಾವಿರಾರು ರುಬಾಯಿಗಳನ್ನು ರಚಿಸಿದ್ದಾನೆ. ಇವನ ರುಬಾಯಿಗಳು ಬದುಕಿನ ಎಲ್ಲಾ ಮುಖದ ಅನುಭವಗಳನ್ನು, ಆಧ್ಯಾತ್ಮದ ತಾತ್ವಿಕ ನೆಲೆಗಟ್ಟಿನಲ್ಲಿ ರಚಿಸಿದ್ದಾನೆ. ಹಾಗೆ ಪ್ರೀತಿ- ಪ್ರೇಮ, ಪ್ರೇಮ -ನಿರಾಸೆ, ಮಧ್ಯ -ಮಾನಿನಿ ಹೀಗೆ ಉಮರ್ ಖಯ್ಯಾಮನ ರುಬಾಯಿಗಳಲ್ಲಿವೆ. ಇವನ ರುಬಾಯಿಗಳು ಜನರ ಮನದಲ್ಲಿ ಇಂದಿಗೂ ನೆಲೆಸಿವೆ ಮತ್ತು ನಲಿದಾಡುತ್ತಿವೆ.
ಜಗತ್ತಿನ ಎಲ್ಲಾ ಭಾಷೆಗಳಲ್ಲಿಯೂ ಉಮರ್ ಖಯ್ಯಾಮನ ರುಬಾಯಿಗಳು ಅನುವಾದಿಸಲ್ಪಟ್ಟಿವೆ. “Small is beautiful” ಅನ್ನುವ ಹಾಗೆ ಜೀವಕ್ಕೆ ಪ್ರೇರಣೆ, ಪೂರಕ ಸತ್ಯಗಳಿಂದ ಕೂಡಿದ ಸಾಹಿತ್ಯ ಪ್ರಕಾರವಿದು.
ಇಲ್ಲಿ ಕಥೆಯ ಹಂಗಿಲ್ಲದೆ, ಪಾತ್ರದ ತಂತ್ರದ ಸಹಾಯವಿಲ್ಲದೆ ಭಾವಗಳ ಸಂದೇಶವನ್ನು ನೇರವಾಗಿ ಮನಮುಟ್ಟುವ ಮತ್ತು ಬದುಕಿಗೆ ಆಹ್ಲಾದವನ್ನುOಟು ಮಾಡುವ ಕಸುವುಗಳಾಗಿವೆ. ವಿಷಯಗಳ ಪರಿಮಿತಿ ಇವಕ್ಕಿಲ್ಲ.
ರುಬಾಯಿಗಳ ರಚನೆಗೆ ತನ್ನದೇ ಆದ ನಿಯಮಗಳಿವೆ. ಮೊದಲಿಗೆ ರುಬಾಯಿಗಳು ನಾಲ್ಕು ಸಾಲಿನ ರಚನೆಗಳು. ಪ್ರತಿ ಸಾಲಿನ ಅಕ್ಷರಗಳು ಸಮವಾಗಿರಬೇಕು. ಅಂದರೆ ಮೊದಲ ಸಾಲಿನಲ್ಲಿ ಎಂಟು ಅಕ್ಷರಗಳಿದ್ದರೆ, ನಾಲ್ಕೂ ಸಾಲು ಗಳು ಕೂಡಾ ಎಂಟು ಅಕ್ಷರಗಳನ್ನು ಹೊಂದಿರಬೇಕು. ಸಾಲುಗಳಲ್ಲಿ ಅಕ್ಷರಗಳ ಸಂಖ್ಯೆಗೆ ನಿರ್ಬಂಧನೆ ಇಲ್ಲ. ಎಷ್ಟು ಸಂಖ್ಯೆಗಳ ಅಕ್ಷರಗಳನ್ನಾದರೂ ಬಳಸಬಹುದು. ಒಂದು ಎರಡು, ನಾಲ್ಕನೆ ಸಾಲುಗಳು ಪ್ರಾಸಬದ್ಧವಾಗಿರಬೇಕು. ಮೂರನೆ ಸಾಲು ಪ್ರಾಸವಾಗಿರದೆ, ಪದ್ಯದ ಸತ್ವವಿದ್ದು ಉಳಿದೆಲ್ಲ ಸಾಲಿಗೆ ಪೂರಕವಾಗಿರಬೇಕು. ನಾಲ್ಕನೆ ಸಾಲು ಇಡೀ ಪದ್ಯದ ಸಾರವಾಗಿರಬೇಕು.
ನಾನು ಬರೆದ ಮೊದಲ ರುಬಾಯಿಗಳು
ಚೆಂದದ ಬದುಕಿಗೆ ಒಂಟಿತನ ಯಾಕೆ ಹಿಗ್ಗಿನ ಬದುಕಿಗೆ ಬೇಸರಿಕೆ ಯಾಕೆ ಎಲ್ಲರೊಳಗೊಂದಾಗಿ ಬದುಕು ಎಂದರೆ ನಿನಗೆ ಬೆರೆಯುವ ತಕರಾರು ಯಾಕೆ