ಗಿರಿಯಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೇ ನವಿಲು


ಗಿರಿಯಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೇ ನವಿಲು
ಕೊಳಕ್ಕಲ್ಲದೆ ಕಿರುವಳ್ಳಕ್ಕೆ ಳಸುವುದೇ ಹoಸೆ
ಮಾಮರ ತಳಿತಲ್ಲದೆ ಸರಗೈವುದೆ ಕೋಗಿಲೆ
ಪರಿಮಳವಿಲ್ಲದ ಪುಷ್ಪಕ್ಕೆ ಳಸುವುದೆ ಭ್ರಮರ
ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ
ಅನ್ಯಕ್ಕೆಳಸುವುದೆ ಎನ್ನ ಮನ
ಪೇಳಿರೆ, ಕೆಳದಿಯರಿರಾ.

ಅತ್ಯಂತ ಸರಳವಾಗಿ ಸುಂದರವಾಗಿ ಚೆನ್ನಮಲ್ಲಿಕಾರ್ಜುನನಲ್ಲಿನ ತನ್ನ ಗಾಢವಾದ ಭಕ್ತಿಯನ್ನು ಅಕ್ಕ ಈ ವಚನದಲ್ಲಿ ವ್ಯಕ್ತಪಡಿಸಿದ್ದಾಳೆ. ಅದಕ್ಕೆ ಅವಳು ಪ್ರಕೃತಿಯ ಚಿತ್ರಗಳನ್ನು ಬಳಸಿಕೊಂಡಿದ್ದಾಳೆ.

ನವಿಲು ಗಿರಿಯಲ್ಲಲ್ಲದೆ ಕುರುಚಲು ಗಿಡಗಳ ಗುಡ್ಡದಲ್ಲಿ ಆಡುವುದಿಲ್ಲ ಅಥವಾ ವಿಹರಿಸುವುದಿಲ್ಲ. ಹಂಸ ಪಕ್ಷಿ ಕೊಳವನ್ನಲ್ಲದೆ ಸಣ್ಣ ಹಳ್ಳವನ್ನು ಬಯಸುವುದಿಲ್ಲ. ಮಾವಿನ ಮರ ಚಿಗುರದೆ ಕೋಗಿಲೆ ತನ್ನ ಮಧುರ ಸ್ವರವನ್ನು ಹೊರಡಿಸುವುದಿಲ್ಲ.  ದುಂಬಿ ಪರಿಮಳವಿಲ್ಲದ ಹೂವನ್ನು ಬಯಸುವುದಿಲ್ಲ. ಅದರಂತೆ ತನ್ನ ಮನಸ್ಸು,  ತನ್ನ ಇಷ್ಟ ದೈವ, ಆರಾಧ್ಯ ದೈವ, ಭಕ್ತಿಯ ದೈವ ಚೆನ್ನಮಲ್ಲಿಕಾರ್ಜುನನಲ್ಲದೆ ಬೇರೆ ಯಾವುದನ್ನೂ ಬಯಸುವುದಿಲ್ಲ. ಅಂದರೆ ಪ್ರತಿಕ್ಷಣವೂ ತಾನು ತನ್ನ ದೈವ ಚೆನ್ನ ಮಲ್ಲಿಕಾರ್ಜುನರಲ್ಲಿರುವುದನ್ನು ಅಕ್ಕ ಪರಿಣಾಮಕಾರಿಯಾಗಿ ಈ ವಚನದಲ್ಲಿ ನಿರೂಪಿಸುತ್ತಾಳೆ.

ಸುಧಾ ಪಾಟೀಲ – ವಿಶ್ವಸ್ಥರು

ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ

By:


Leave a comment